ಕುಡಿಯುವ ನೀರಿಗಾಗಿ ಯರಡಾಲ ಜನರ ಪರದಾಟ

| Published : Mar 18 2024, 01:46 AM IST

ಸಾರಾಂಶ

ಬೈಲಹೊಂಗಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಗ್ರಾಮಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿವೆ. ಆದರೆ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಿಂದಾಗಿ ಇನ್ನೂ ಎಷ್ಟೋ ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿ ಅಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಉದಯ ಕೊಳೇಕರ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಗ್ರಾಮಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿವೆ. ಆದರೆ, ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಯಿಂದಾಗಿ ಇನ್ನೂ ಎಷ್ಟೋ ಗ್ರಾಮಗಳು ಮೂಲಸೌಕರ್ಯಗಳಿಂದ ವಂಚಿತವಾಗಿ ಅಲ್ಲಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಇದಕ್ಕೆಉದಾಹರಣೆ ಎಂಬಂತೆ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಯರಡಾಲ ಗ್ರಾಮ. ಸುಮಾರು 4500 ಜನಸಂಖ್ಯೆ ಹೊಂದಿದ ಈ ಗ್ರಾಮ ತಾಲೂಕು ಕೇಂದ್ರದಿಂದ ಕೇವಲ 10 ಕಿಮೀ ವ್ಯಾಪ್ತಿಯಲ್ಲಿ ಬರುತ್ತದೆ. ಮೂಲಸೌಕರ್ಯ ಮರೀಚಿಕೆಯಾಗಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಕೊಡಗಳನ್ನು ಹಿಡಿದು ಅಲೆದಾಡುವ ಪರಿಸ್ಥಿತಿ. ಗಬ್ಬೆದ್ದು ನಾರುವ ಗಟಾರುಗಳು, ರಸ್ತೆಯಲ್ಲಿ ಹರಿಯುವ ಕೊಳಚೆ ನೀರು, ಅಗೆದು ಅರ್ಧಕ್ಕೆ ಬಿಟ್ಟಿರುವ ರಸ್ತೆಯಲ್ಲಿ ಸಂಚಾರಕ್ಕೆ ಸರ್ಕಸ್‌ ಮಾಡುವ ಸ್ಥಿತಿ... ಇಂಥ ಅನೇಕ ಸಮಸ್ಯೆಗಳ ಜೊತೆಗೆ ಬದುಕು ಸಾಗಿಸುವುದು ಇಲ್ಲಿನ ಜನತೆಗೆ ಅನಿವಾರ್ಯವಾಗಿದೆ.

ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್‌ (ಜೆಜೆಎಂ) ಮಂಜೂರಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ನನೆಗುದಿಗೆ ಬಿದ್ದಿದೆ. ₹1.34 ಕೋಟಿ ಅಂದಾಜು ವೆಚ್ಚದಲ್ಲಿ 492 ಮನೆಗಳಿಗೆ ನಲ್ಲಿ ನೀರು ಪೂರೈಸಲು 2021-22ನೇ ಸಾಲಿನಲ್ಲಿ ಗ್ರಾಮದಲ್ಲಿ ಜೆಜೆಎಂ ಯೋಜನೆ ಆರಂಭಿಸಲಾಯ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 7-10-2022ಕ್ಕೆ ಯೋಜನೆ ಪೂರ್ಣ ಮುಕ್ತಾಯವಾಗಿ ಮನೆಗಳಿಗೆ ನಲ್ಲಿ ನೀರು ಬರಬೇಕಿತ್ತು.

ಆದರೆ ಗುತ್ತಿಗೆದಾರನ ಅಸಡ್ಡೆ, ಅಧಿಕಾರಿಗಳ ನಿರಾಸಕ್ತಿ ಕಾರಣದಿಂದ ಕಾಮಗಾರಿ ನನೆಗುದಿಗೆ ಬಿದ್ದಿದ್ದು ಮನೆ ಮನೆಗೆ ಗಂಗೆ ಯಾವಾಗ ಬರುವಳೋ ಎಂದು ಇಲ್ಲಿನ ಜನರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಗುತ್ತಿಗೆದಾರರು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ. ಗ್ರಾಮದಲ್ಲಿ ಪೈಪ್‌ಲೈನ್ ಕಾಮಗಾರಿ ಮುಕ್ತಾಯಗೊಂಡಿದ್ದು, ನೀರಿನ ಟ್ಯಾಂಕ್ ನಿರ್ಮಾಣ ಅರ್ಧಕ್ಕೆ ನಿಂತಿದೆ. ಅಧಿಕಾರಿಗಳು, ಪಿಡಿಒ, ಗ್ರಾಪಂ ಪ್ರತಿನಿಧಿಗಳು ಸಂಪರ್ಕಿಸಲು ಪ್ರಯತ್ನಿಸಿದರೂ ಫೋನ್‌ ಕರೆ ಸ್ವೀಕರಿಸುತ್ತಿಲ್ಲ ಎಂದು ದೂರು ಕೇಳಿಬಂದಿವೆ.

ನೀರಿಗಾಗಿ ಅಲೆದಾಟ:

ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಗ್ರಾಮದ ಮಹಿಳೆಯರು ಮೈಲುದ್ದ ದೂರ ಅಲೆದು ತೋಟಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ. ಶಕ್ತಿನಗರ ಬಡಾವಣೆಯಲ್ಲಿದ್ದ ಕೊಳವೆಬಾವಿ ಕೈಪಂಪ್‌ ರಿಪೇರಿಗೆ ಬಂದಿದ್ದು, ಒಂದು ತಿಂಗಳಾದರೂ ರಿಪೇರಿ ಮಾಡಿಲ್ಲ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮುಂದಿನ ತಿಂಗಳು ಗ್ರಾಮದೇವಿಯ ದೊಡ್ಡ ಜಾತ್ರೆ ನಡೆಯಲಿದೆ. ಜಾತ್ರೆಗೆ ಬಹುಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಂಭವವಿದೆ. ಇರುವ ಜನತೆಗೆ ನೀರು ಸಾಲುತ್ತಿಲ್ಲ. ಇನ್ನು ಜಾತ್ರೆಗೆ ನೆಂಟರು ಬಂದರೆ ಏನು ಗತಿ ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಅವೈಜ್ಞಾನಿಕ ಕಾಮಗಾರಿ:

ಜೆಜೆಎಂ ಯೋಜನೆಯಡಿ ಗ್ರಾಮದಲ್ಲಿ ಮಾಡಿರುವ ಸಿಮೆಂಟ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಸರಿಯಾಗಿ ಗಟಾರು ಮಾಡದೇ ಇರುವುದರಿಂದ ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ಇರುವ ಚರಂಡಿ ನೀರು ಸರಾಗವಾಗಿ ಸಾಗದೇ ತುಂಬಿಕೊಂಡು ದುರ್ನಾತ ಬೀರುತ್ತಿವೆ. ಜನರು ಮೂಗು ಮುಚ್ಚಿಕೊಂಡು ನಡೆದಾಡುವ ಸ್ಥಿತಿ ಇದೆ. ಸೊಳ್ಳೆಗಳ ಕಾಟಕ್ಕೆ ಜನರು ಬೇಸತ್ತು ಹೋಗಿದ್ದು, ಸಾಂಕ್ರಾಮಿಕ ರೋಗ ಭೀತಿಯಲ್ಲಿದ್ದಾರೆ.

ಇನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಎರಡು ಕೊಠಡಿಗಳು ಶಿಥಿಲಗೊಂಡಿದ್ದರಿಂದ ಈಚೆಗೆ ನೆಲಸಮಗೊಳಿಸಲಾಗಿದೆ. ಇದರಿಂದ ಮಕ್ಕಳಿಗೆ ಕೊಠಡಿಗಳ ಕೊರತೆಯಾಗಿ ಸಮುದಾಯ ಭವನ, ದೇವಸ್ಥಾನಗಳಲ್ಲಿ ಪಾಠ ಕೇಳುವ ಸ್ಥಿತಿ ಇದೆ. ಶಾಲೆಯ ಹಿಂದಿನ ರಸ್ತೆಗೆ ಹೊಂದಿಕೊಂಡೇ ಸ್ಮಶಾನ ಇದ್ದು, ಹೆಣಗಳನ್ನು ಸುಡುವುದರಿಂದ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳು ಆತಂಕದಲ್ಲೇ ಪಾಠ ಕೇಳಬೇಕಾದ ಅನಿವಾರ್ಯತೆ ಉಂಟಾಗಿದೆ. ಶಕ್ತಿನಗರ ಬಡಾವಣೆಗೆ ಬಸ್ ಶೆಲ್ಟರ್ ಅವಶ್ಯಕತೆ ಇದ್ದು, ಈ ಬಡಾವಣೆಯಲ್ಲಿದ್ದ ಕುಡಿಯುವ ನೀರಿನ ಬೋರ್‌ವೆಲ್ ಕೆಟ್ಟಿದ್ದು, ಕೂಡಲೇ ರಿಪೇರಿ ಮಾಡಿ ಅನುಕೂಲ ಒದಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

--------ಕೋಟ್‌----

ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಜಲಜೀವನ್‌ ಮಿಶನ್ ಯೋಜನೆ ಪ್ರಾರಂಭಿಸಲಾಗಿದ್ದು, ಇಷ್ಟೊತ್ತಿಗೆ ಕಾಮಗಾರಿ ಮುಗಿಯಬೇಕಿತ್ತು. ಕಾಮಗಾರಿಗೆ ಕೆಲವೊಂದು ಸಮಸ್ಯೆ ಎದುರಾದ ಕಾರಣ ವಿಳಂಬವಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು.

-ಶಿವನಗೌಡ ಪಾಟೀಲ, ಸಹಾಯಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೈಲಹೊಂಗಲ

---

ಯರಡಾಲ ಗ್ರಾಮ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು ಜಲಜೀವನ್‌ ಮಿಶನ್ ನನೆಗುದಿಗೆ ಬಿದ್ದ ಕಾರಣ ಜನರು ಸಂಕಷ್ಟ ಎದುರಿಸಬೇಕಾಗಿದೆ. ಬೇಗನೆ ಕಾಗಮಾರಿ ಮುಕ್ತಾಯಗೊಳಿಸಿ ನಲ್ಲಿಗಳಿಗೆ ನೀರು ಬಿಡಬೇಕಿದೆ.

- ಶ್ರೀಶೈಲ ರಾಜಗೋಳಿ ಸಾಮಾಜಿಕ ಕಾರ್ಯಕರ್ತ ಯರಡಾಲ

--------------