ಅಘನಾಶಿನಿ ನದಿಗೆ ಆರತಿ, ಕಣ್ತುಂಬಿಕೊಂಡ ಸಹಸ್ರಾರು ಜನರು

| Published : Feb 27 2024, 01:30 AM IST

ಅಘನಾಶಿನಿ ನದಿಗೆ ಆರತಿ, ಕಣ್ತುಂಬಿಕೊಂಡ ಸಹಸ್ರಾರು ಜನರು
Share this Article
  • FB
  • TW
  • Linkdin
  • Email

ಸಾರಾಂಶ

ನದಿಗಳಿಗೆ ಕೃತಜ್ಞತೆ ಸಲ್ಲಿಸುವ ಆರತಿ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಬೇಕು ಹಾಗೂ ನದಿಗಳು ಸ್ವಚ್ಛಂದವಾಗಿ ಹರಿಯಬೇಕು.

ಕುಮಟಾ:

ನದಿಗಳಿಗೆ ಕೃತಜ್ಞತೆ ಸಲ್ಲಿಸುವ ಆರತಿ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಬೇಕು ಹಾಗೂ ನದಿಗಳು ಸ್ವಚ್ಛಂದವಾಗಿ ಹರಿಯಬೇಕು ಎಂದು ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥಶ್ರೀಪಾದ ವಡೇರ್ ಸ್ವಾಮೀಜಿ ನುಡಿದರು.

ಯುವ ಬ್ರಿಗೇಡ್ ವತಿಯಿಂದ ಭಾನುವಾರ ಅಘನಾಶಿನಿಯಲ್ಲಿ ಎರಡನೇ ವರ್ಷದ ಅಘನಾಶಿನಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ವೇದಕಾಲಗಳಿಂದಲೂ ನದಿಗಳ ಮಹತ್ವವನ್ನು ವಿಶ್ವಕ್ಕೆ ಅರುಹಲಾಗಿದೆ. ನದಿಗಳು ಸಕಲ ಜೀವಜಂತುಗಳ ಜತೆಗೆ ಮನುಷ್ಯರ ಸ್ವಸ್ಥ ಸುಂದರ ಜೀವನವನ್ನು ಕೂಡಾ ರೂಪಿಸಿವೆ ಎಂದರು.ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಅಘನಾಶಿನಿ ನದಿಯ ವೈಭವ ಮತ್ತು ವಿಶೇಷತೆ ಅಪ್ರತಿಮವಾದದ್ದು. ಎಲ್ಲರ ಜನನ-ಮರಣದ ಸಾಕ್ಷೀಭೂತವಾಗಿರುವ ನದಿಗಳನ್ನು ಸಾಧ್ಯವಾದಷ್ಟು ಸ್ವಚ್ಛಮಾಡಿ ಆರತಿ ಮಾಡುವ ಹಬ್ಬವನ್ನು ಯುವ ಬ್ರಿಗೇಡ್ ಮಾಡುತ್ತಾ ಬಂದಿದೆ. ಹಿಂದಿನ ವರ್ಷವೂ ಅಘನಾಶಿನಿಗೆ ಆರತಿ ಕಾರ್ಯ ನಡೆದಿದ್ದು, ವರ್ಷದಿಂದ ವರ್ಷಕ್ಕೆ ಸಂಭ್ರಮ ಮತ್ತು ಜನರ ಆಸ್ಥೆ ಹೆಚ್ಚಿದೆ ಎಂದರು.ಅತಿಥಿ, ನಿವೃತ್ತ ಸೈನಿಕ ಹವಾಲ್ದಾರ್ ಮಹೇಶ ಮಾಸ್ತಿ ಹರಿಕಾಂತ, ನಾನು ಯುವ ಬ್ರಿಗೇಡ್ ಬಗ್ಗೆ ತಿಳಿದಿದ್ದು ಸೈನಿಕರು ನಿವೃತ್ತಿಯಾದಾಗ ಅವರನ್ನು ಸ್ವಾಗತಿಸುವ ಕಾರ್ಯಕ್ರಮದಿಂದ. ಇಂದು ಯುವ ಬ್ರಿಗೇಡ್ ಇಂಥ ಹಲವಾರು ಜಾಗೃತಿ ಕಾರ್ಯಕ್ರಮಗಳಿಂದ ಎಲ್ಲರ ಮನೆ ಹಾಗೂ ಮನದ ಮಾತಾಗಿದೆ ಎಂದು ಶ್ಲಾಘಿಸಿದರು.

ಸ್ಥಳೀಯ ದಿವಾಕರ ನಾಯ್ಕ, ಅಘನಾಶಿನಿ ನದಿ ಮತ್ತು ಹಾಗೂ ನದಿಪಾತ್ರದ ಜನ-ಜೀವನ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ಅಘನಾಶಿನಿ ಗ್ರಾಮದ ಮೂವರು ಕಲಾಪೋಷಕರು, ಏಳು ಮಂದಿ ಶಿಲ್ಪಕಲಾವಿದರನ್ನು ಸನ್ಮಾನಿಸಲಾಯಿತು. ಬಳಿಕ ಯುವ ಬ್ರಿಗೇಡ್ ಸದಸ್ಯರಾದ ಸಚಿನ ಭಂಡಾರಿ, ಮಂಜುಗೌಡ ಗೌಡ, ಚಿದಂಬರ ಅಂಬಿಗ, ಯಮುನಾ ಅಂಬಿಗ, ಜ್ಯೋತಿ ನಾಯ್ಕ ಅವರು ಶುಭ್ರವಸ್ತ್ರಗಳನ್ನು ತೊಟ್ಟು ಆಕರ್ಷಕ ರಂಗಸಜ್ಜಿಕೆಯಲ್ಲಿ ಅಘನಾಶಿನಿ ನದಿಗೆ ಆರತಿ ಸಮರ್ಪಿಸಿದರು. ಎಲ್ಲೆಡೆಯಿಂದ ಆಗಮಿಸಿದ್ದ ಸಹಸ್ರಾರು ಮಂದಿ ಆರತಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.