ಕನ್ನಡಪ್ರಭ ವಾರ್ತೆ ಅಥಣಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅಪಹರಣ ಮಾಡಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಅನ್ಯ ಕೋಮಿನ ಯುವಕ ಸೇರಿದಂತೆ ಮೂವರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿ

ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅಪಹರಣ ಮಾಡಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ ಅನ್ಯ ಕೋಮಿನ ಯುವಕ ಸೇರಿದಂತೆ ಮೂವರನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

ಅಥಣಿ ಪಟ್ಟಣದಿಂದ ಕಳೆದ ಒಂದು ವಾರದ ಹಿಂದೆ ಅಪಹರಣ ಮಾಡಿದ್ದ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಇಕ್ಬಾಲ್‌ ಅಮೀನಸಾಬ ಶೇಖ್‌ (೨೧), ಈತನಿಗೆ ಸಹಾಯ ಮಾಡಿದ್ದ ಚಿಕ್ಕಟ್ಟಿ ಗ್ರಾಮದ ಶ್ರೀಧರ ಪತ್ತಾರ (26), ಅಥಣಿಯ ಸಿದ್ಧಾರ್ಥ ನಗರದ ರೋಹಿತ ಸಂತೋಷ ಖದ್ರಿ (19) ಬಂಧಿತ ಆರೋಪಿಗಳು. ಅಲ್ಲದೆ, ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಲಾಗಿದೆ. ಬಾಲಕಿಯನ್ನು ಮತಾಂತರಕ್ಕೆ ಯತ್ನ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ, ಯಾವುದೇ ಮತಾಂತರಕ್ಕೆ ಯತ್ನ ನಡೆದಿಲ್ಲ ಎಂದು ಇತ್ತ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ...?:

ಜ.10 ರಂದು ಅಥಣಿ ಪೊಲೀಸ್‌ ಠಾಣೆ ವ್ಯಾಪ್ತಿಯೊಂದರಲ್ಲಿ ಪ್ರೀತಿ ಮಾಡುವುದಾಗಿ ಮತ್ತು ಮದುವೆ ಅಗುವುದಾಗಿ ನಂಬಿಸಿ ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಒತ್ತಾಯ ಪೂರ್ವಕವಾಗಿ ಅಪಹರಣ ಮಾಡಿದ್ದ ಬಗ್ಗೆ ಬಾಲಕಿಯ ತಾಯಿ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಿದ್ದ ಅಥಣಿ ಪೊಲೀಸರು ಜ.15ರಂದು ಬಾಲಕಿ ಬೆಂಗಳೂರಿನಲ್ಲಿದ್ದ ಬಗ್ಗೆ ಪತ್ತೆ ಹಚ್ಚಿ ಅವಳನ್ನು ರಕ್ಷಣೆ ಮಾಡಿ ಅಥಣಿಗೆ ಕರೆ ತಂದು ಅವಳ ಹೇಳಿಕೆ ಆಧಾರದ ಮೇಲೆ ಪ್ರಮುಖ ಆರೋಪಿ ಇಕ್ಬಾಲ್ ಶೇಖ್‌, ಈತನ ಸಹಚರರಾದ ರೋಹಿತ ಖದ್ರೆ, ಶ್ರೀಧರ್ ಪತ್ತಾರ ಎಂಬುವರನ್ನು ಬಂಧಿಸಲಾಗಿದೆ. ಮೂವರು ಅರೋಪಿಗಳ ವಿರುದ್ಧ ಅಪಹರಣ, ಪೋಸ್ಕೋ ಪ್ರಕರಣಗಳ ಅಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.