ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣ ಸಾವು

| Published : Oct 09 2024, 01:31 AM IST

ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಧಾರಾಕಾರ ಮಳೆ, ಗಾಳಿಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ಕಲ್ಲುಸಾದರಹಳ್ಳಿ ಬಳಿ ನಡೆದಿದೆ. ಕಲ್ಲು ಸಾಗರಹಳ್ಳಿ ರೈತರೊಬ್ಬರ ಜಮೀನಿನಲ್ಲಿ ನಡೆದು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಏಳು ವರ್ಷದ ಒಂದು ಹೆಣ್ಣು ಹಾಗು ಒಂದು ಗಂಡು ಕರಡಿ ಮತ್ತು ಮರಿ ಸೇರಿ ಮೂರು ಮೂಕ ಪ್ರಾಣಿಗಳು ಸಾವನ್ನಪ್ಪಿವೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಧಾರಾಕಾರ ಮಳೆ, ಗಾಳಿಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ಕಲ್ಲುಸಾದರಹಳ್ಳಿ ಬಳಿ ನಡೆದಿದೆ.

ಆಹಾರ ಅರಸಿ ಅಲೆದಾಡುತ್ತಿದ್ದ ಏಳು ವರ್ಷದ ಎರಡು ಜೋಡಿ ಕರಡಿ ಹಾಗೂ ಒಂದು ವರ್ಷದ ಮರಿ ಜಾಂಬವಂತ ಹಸಿವು ನೀಗಿಸಿಕೊಳ್ಳುವ ಮುನ್ನವೇ ಜೀವ ಕಳೆದುಕೊಂಡಿವೆ. ಕಳೆದ ಹಲವು ದಿನಗಳಿಂದ ಅರಸೀಕೆರೆ ಭಾಗದಲ್ಲಿ ಆಹಾರ, ನೀರು ಅರಸಿ ಜಾಂಭವ ಪಡೆ ಪಡೆ ಕಾಡಿನಿಂದ ನಾಡಿಗೆ ಬರುವುದು ಸಾಮಾನ್ಯವಾಗಿದೆ. ಹೀಗೆ ಕಾಡಿನಿಂದ ಬಂದು ಅರಣ್ಯ ದಂಚಿನಲ್ಲೇ ಇದ್ದ ಕಲ್ಲು ಸಾಗರಹಳ್ಳಿ ರೈತರೊಬ್ಬರ ಜಮೀನಿನಲ್ಲಿ ನಡೆದು ಹೋಗುತ್ತಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಏಳು ವರ್ಷದ ಒಂದು ಹೆಣ್ಣು ಹಾಗು ಒಂದು ಗಂಡು ಕರಡಿ ಮತ್ತು ಮರಿ ಸೇರಿ ಮೂರು ಮೂಕ ಪ್ರಾಣಿಗಳು ಸಾವನ್ನಪ್ಪಿವೆ. ರೈತನ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಮೊದಲು ಗಂಡು ಕರಡಿ ತುಳಿದಿದೆ. ಕೂಡಲೇ ವಿದ್ಯುತ್ ಶಾಕ್‌ನಿಂದ ಕಿರೀಚಾಡುತ್ತಾ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದೆ. ಗಂಡು ಕರಡಿ ಒದ್ದಾಡಿದ್ದನ್ನು ಕಂಡು ಮರಿ ಕರಡಿ ಹಾಗೂ ತಾಯಿ ಕರಡಿ ಗಾಬರಿಯಿಂದ ಓಡಲಾರಂಭಿಸಿವೆ.

ಈ ಧಾವಂತದಲ್ಲಿ ಗಂಡು ಕರಡಿ ಮೃತಪಟ್ಟ ಜಮೀನಿನ ಪಕ್ಕದಲ್ಲಿ ಮತ್ತೊಬ್ಬ ರೈತ ಭೂಮಿಯಲ್ಲೂ ಅದೇ ಮಾರ್ಗದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಗಮನಿಸದೆ ಹೆಣ್ಣು ಕರಡಿ ಮತ್ತು ಮರಿ ಕರಡಿ ತುಳಿದಿವೆ. ಕರೆಂಟ್ ಶಾಕಿನಿಂದ ಎರಡು ಸ್ಥಳದಲ್ಲಿ ಮೃತಪಟ್ಟಿವೆ. ಸೋಮವಾರ ಬೆಳಗ್ಗೆ ರೈತರು ಜಮೀನಿನ ಬಳಿ ಬಂದ ವೇಳೆ ಕೆಲವು ದೂರದ ಅಂತರದಲ್ಲಿ ಮೂರು ಕರಡಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಕರೆಂಟ್ ಶಾಕಿನಿಂದಲೇ ಮೂರು ಕರಡಿ ಮೃತಪಟ್ಟಿವೆ ಎಂಬುದು ಖಾತ್ರಿಯಾಗಿದೆ. ಕೂಡಲೇ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಆಗೋ ವಿದ್ಯುತ್ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ಸರಣಿ ದುರಂತಕ್ಕೆ ಅಕ್ಷರಶಃ ಮರುಕ ಪಟ್ಟ ಸ್ಥಳೀಯರು ಹಾಗೂ ರೈತರು ಕರಡಿಗಳನ್ನು ತಮ್ಮ ಪ್ರಾಣ ಕಳೆದುಕೊಂಡು ನಮ್ಮ ಪ್ರಾಣ ಉಳಿಸಿವೆ ಎಂದು ನಿಟ್ಟಿಸಿರು ಬಿಟ್ಟರು. ಸ್ಥಳದಲ್ಲೇ 3 ಕರಡಿಗಳ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಕರಡಿ ವಿಚಾರ ಕುರಿತು ಜಿಪಂ ಸಭಾಂಗಣದಲ್ಲಿ ಸೋಮವಾರ ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಮಾತನಾಡಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವುದು ಹಸಿವಿನಿಂದಲೇ ಅಲ್ಲವೇ ಅವುಗಳಿಗೆ ಬೇಕಾದ ಆಹಾರ ಕುಡಿಯುವ ನೀರು ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.