ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಬಿಸಿಲಿನ ತಾಪದಿಂದ ಕೆರೆಗೆ ಈಜಲು ಹೋದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕೆಂಭಾವಿ ಪಟ್ಟಣ ವ್ಯಾಪ್ತಿಯ ನಗನೂರ-ಖಾನಾಪೂರ ಬಳಿ ಇರುವ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.ಖಾನಾಪುರ ಗ್ರಾಮದ ಮನೋಜ ದೊರಿ (12), ನಗನೂರ ಗ್ರಾಮದ ಹಯ್ಯಾಳಪ್ಪ ಕಾಟಮನಳ್ಳಿ (12) ಹಾಗೂ ಶರಣಬಸವ ನಾಟೇಕಾರ (12) ಎನ್ನುವ ಬಾಲಕರೇ ಕೆರೆಯಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿಗಳು.
ಬೇಸಿಗೆ ಬಿಸಿಲಿನ ತಾಪ ತಾಳಲಾರದೆ ಮಂಗಳವಾರ ಮಧ್ಯಾಹ್ನ ನಗನೂರು ಪಕ್ಕದ ಖಾನಾಪುರ ಕೆರೆಗೆ ಮೂವರು ಬಾಲಕರು ಈಜಲು ಹೋಗಿದ್ದಾರೆ. ಈಜಾಡಲು ಕೆರೆಯ ನೀರಿನಲ್ಲಿ ಹಾರಿದಾಗ ಕೆಸರಿನಲ್ಲಿ ಸಿಲುಕಿ ಬಾಲಕರು ದುರಂತ ಸಾವಿಗೀಡಾಗಿದ್ದಾರೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದರು ಎನ್ನಲಾಗಿದೆ.ಘಟನೆ ಸ್ಥಳದಲ್ಲಿ ಕುಟುಂಬಸ್ಥರ ಆಕ್ರದನ ಮುಗಿಲು ಮುಟ್ಟಿದ್ದು, ಬಾಲಕರ ಅಕಾಲಿಕ ಮರಣದಿಂದ ಎರಡೂ ಗ್ರಾಮಗಳಲ್ಲಿ ನೀರವ ಮೌನ ಆವರಿಸಿತ್ತು. ಘಟನಾ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಭಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಾನವೀಯತೆ ಮೆರೆದ ಪೊಲೀಸರು: ಈಜಾಡಲು ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು ಪ್ರಕರಣಕ್ಕೆ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ. ಮೃತ ಬಾಲಕರ ಕುಟುಂಬದ ಕಣ್ಣೀರಿಗೆ ಮಿಡಿದ ಪೊಲೀಸ್ ಇಲಾಖೆಯ ಅಧಿಕಾರಿಗಳು, ಮೃತ ಬಾಲಕರ ಅಂತ್ಯಸಂಸ್ಕಾರಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಗೋಗಿ ಠಾಣೆಯ ಪಿಎಸೈ ಪಿಎಸ್ಐ ದೇವೇಂದ್ರರೆಡ್ಡಿ ಹಾಗೂ ರಾಜಶೇಖರ್ ರಾಠೋಡ್ ಕುಟುಂಬದ ಮುಖ್ಯಸ್ಥರಿಗೆ ಆರ್ಥಿಕ ನೆರವು ನೀಡಿ, ಅಂತ್ಯ ಸಂಸ್ಕಾರ ಮುಗಿಯುವವರೆಗೂ ಗ್ರಾಮದಲ್ಲೇ ಬೀಡು ಬಿಟ್ಟಿದ್ದರು