ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕೊಳ್ಳೇಗಾಲ ಪಟ್ಟಣದಲ್ಲಿ ದಶಕಗಳಿಗೂ ಅಧಿಕ ಕಾಲದಿಂದ ಅಂಬೇಡ್ಕರ್ ಭವನ ಕುಂಟುತ್ತಾ ಸಾಗಿದ್ದು ಮುಂದುವರೆದ ಕಾಮಗಾರಿಗೆ ರಾಜ್ಯ ಸರ್ಕಾರ 3 ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು ಇಲ್ಲಿ ಕಾಮಗಾರಿ ಪುನರ್ ಆರಂಭಕ್ಕೆ ಎದುರಾಗಿರುವ ನ್ಯೂನತೆಯನ್ನು ಸಮಾಜದ ಮುಖಂಡರು, ಕೊಳ್ಳೇಗಾಲ ಭೀಮನಗರದ ಯಜಮಾನರು ಹಾಗೂ ಸ್ವಾಭಿಮಾನಿ ಮುಖಂಡರು ಕೈ ಜೋಡಿಸಬೇಕು ಎಂದು ಶಾಸಕ ಎ. ಆರ್.ಕೃಷ್ಣಮೂರ್ತಿ ಹೇಳಿದರು.ವೆಂಕಟೇಶ್ವರ ಮಹಲ್ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಡಾ.ಅಂಬೇಡ್ಕರ್ ಆಶಯದಂತೆ ಸರ್ಕಾರದ ಮೀಸಲಾತಿ ಸೌಲಭ್ಯದಿಂದ ನೌಕರಿ ಪಡೆದಿರುವ ಎಲ್ಲಾ ಎಸ್ಸಿ, ಎಸ್ಟಿ ಸರ್ಕಾರಿ ಅಧಿಕಾರಿಗಳು ರಾಜ್ಯಾಧ್ಯಂತ ಎವಿಎಸ್‌ಎಸ್ ಸಂಘದ ಬೆಂಬಲಕ್ಕೆ ನಿಂತು ಷೇರುದಾರರಾಗಬೇಕು. ಸರ್ಕಾರದ ಮೀಸಲಾತಿ ಸೌಲಭ್ಯದಿಂದ ನೌಕರಿ ಪಡೆದಿರುವ ಎಲ್ಲಾ ಎಸ್ಸಿ, ಎಸ್ಟಿ ಸರ್ಕಾರಿ ಅಧಿಕಾರಿಗಳು ರಾಜ್ಯಾದ್ಯಂತ ಸ್ವಯಂ ಷೇರುದಾರರಾಗುವ ಮೂಲಕ ಎವಿಎಸ್‌ಎಸ್ ಸಂಘದ ಬೆಂಬಲಕ್ಕೆ ನಿಲ್ಲುವ ಮೂಲಕ ಸ್ವಾಭಿಮಾನ ಪ್ರದರ್ಶಿಸಬೇಕು, ಎವಿಎಸ್‌ಎಸ್ ಸಂಘ ಈವರೆಗೆ ರಾಜ್ಯಾಧ್ಯಂತ 77 ಲಕ್ಷ ಲಾಭದಾಯಕದಲ್ಲಿರುವುದು ಶ್ಲಾಘನೀಯ. ಅಂಬೇಡ್ಕರ್ ಅವರು ಕೊಡುಗೆ ನೀಡಿದ ಸಂವಿಧಾನದ ಮೂಲಕ ದೇಶದಾದ್ಯಂತ ನಾವೆಲ್ಲರೂ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣ ಬದುಕನ್ನು ನಡೆಸುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎವಿಎಸ್‌ಎಸ್ ರಾಜ್ಯ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಎವಿಎಸ್‌ಎಸ್ ಸಂಘ ಎಸ್ಸಿ, ಎಸ್ಟಿ ಜನಾಂಗದ ಬದುಕಿಗೆ ಬಹಳ ಮುಖ್ಯವಾಗಿದೆ ಎಂಬುದು ನಿಮಗೆ ಮುಂದೊದು ದಿನದಲ್ಲಿ ತಿಳಿಯಲಿದೆ. ಈಗ ಅದರ ಮಹತ್ವ ನಿಮಗಾರಿಗೂ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು. ಕೊಳ್ಳೇಗಾಲ ತಾಲೂಕಿನಲ್ಲಿ ಇದುವರೆಗೆ ಕೇವಲ 750ಮಂದಿ ಮಾತ್ರ ಸದಸ್ಯರಾಗಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.ಈ ಸಂಘ 2012ರಲ್ಲಿ ತಿ.ನರಸೀಪುರ ತಾಲೂಕಿನಲ್ಲಿ 7.52ಲಕ್ಷ ಷೇರು ಹಣದೊಂದಿಗೆ ಆರಂಭಗೊಂಡು ಇಂದು 17ಕೋಟಿಗೂ ಅಧಿಕ ವ್ಯವಹಾರ ನಡೆಸಲಾಗುತ್ತಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ರಾಮನಗರ ಜಿಲ್ಲೆ ಸೇರಿ ಒಟ್ಟು 5 ಜಿಲ್ಲೆಗಳಲ್ಲಿ ಈ ಸಂಘ ಕಾರ್ಯಾರಂಬಿಸಿ, ಒಟ್ಟು ೨೮ ತಾಲೂಕಿನಲ್ಲಿ ಸಂಘದ ಶಾಖೆ ಆರಂಭಗೊಂಡಿದೆ ಎಂದರು.
ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಸಭೆಯ ಸಾನ್ನಿದ್ಯ ವಹಿಸಿ ಮಾತನಾಡಿ, ಎವಿಎಸ್‌ಎಸ್ ಸಂಘಕ್ಕೆ ಹೆಚ್ಚೆಚ್ಚು ಶಕ್ತಿ ತುಂಬುವ ಕೆಲಸ ಎಸ್ಸಿ, ಎಸ್ಟಿ ಸಮುದಾಯದ ಜನರಿಂದ ಆಗಬೇಕು. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಆರ್ಥಿಕ ಸ್ವಾವಲಂಬನೆ ಹೊಂದಲು ಇದು ಸಹಕಾರಿಯಾಗಿದ್ದು ಈ ಬಗ್ಗೆ ನಮ್ಮ ಜನರು ಹೆಚ್ಚು ಜಾಗೃತರಾಗಬೇಕು ಎಂದರು.ಸಭೆಯಲ್ಲಿ ಚಾ.ನಗರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ವಿಭಾಗದ ಇಇ ಎಸ್.ಆನಂದಮೂರ್ತಿ, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ದಿವ್ಯಪ್ರಕಾಶ್, ನಿವೃತ್ತ ವಿಜ್ಞಾನಿ ಆರ್.ಧರ್ಮರಾಜು, ಚಾ.ನಗರದ ಡೀನ್ ಮತ್ತು ಸಿಮ್ಸ್ ನಿರ್ದೇಶಕ ಡಾ.ಮಂಜುನಾಥ್, ಯಳಂದೂರಿನ ಆರೋಗ್ಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸೋಮಣ್ಣ, ಗುಂಡ್ಲುಪೇಟೆಯ ಪ್ರಸೂತಿ ತಜ್ಞ ಡಾ.ಎಸ್.ವೆಂಕಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹಾದೇವ, ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್, ಎಚ್.ಕೆ.ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ, ಸರ್ಕಾರಿ ಉಪ ವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಎಂ.ರಾಜಶೇಖರ್, ಯಳಂದೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ರೀಧರ್, ನಿರ್ವಹಣಾ ಸಮಿತಿಯ ಎಚ್.ಮೋಹನ್ ಕುಮಾರ್, ಆನಂದರಾಜು, ಮುಳ್ಳೂರು ಶಂಕರ್, ಸಿ.ನಾಗರಾಜು, ಭೀಮನಗರದ ಕೆ.ನಾಗರಾಜು, ಬಿ.ಮಹಾದೇವ, ಬಸ್ತೀಪುರ ಪ್ರಕಾಶ್, ಕೆಂಪನಪಾಳ್ಯ ಉದಯ್, ಮುಡಿಗುಂಡ .ಮೂರ್ತಿ, ರಾಜೇಂದ್ರ ಸಾಮ್ರಾಟ್ ಇನ್ನಿತರರಿದ್ದರು.