ರಾಷ್ಟ್ರೀಯ ಸಿಮ್ಯುಲೇಶನ್ ಸೆಂಟರ್‌, ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಕೇಂದ್ರದ ಉದ್ಘಾಟನೆ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನ ಡಿ.5ರಿಂದ ನಡೆಯಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಷ್ಟ್ರೀಯ ಸಿಮ್ಯುಲೇಶನ್ ಸೆಂಟರ್‌, ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಕೇಂದ್ರದ ಉದ್ಘಾಟನೆ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನ ಡಿ.5ರಿಂದ ನಡೆಯಲಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದರು.

ಬಿವಿವಿ ಸಂಘದ ಮೆಡಿಕಲ್ ಕಾಲೇಜಿನ ಆವರಣದಲ್ಲಿನ ಫಿಜಿಯೋಥೆರಪಿ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಡಿ.5ರಂದು ಬೆಳಗ್ಗೆ 9.30ಕ್ಕೆ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಶತಾಬ್ಧಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನವದೆಹಲಿಯ ಇಂಡಿಯನ್ ನರ್ಸಿಂಗ್‌ ಕೌನ್ಸಿಲ್ ಅಧ್ಯಕ್ಷ ಡಾ.ಟಿ. ದಿಲೀಪಕುಮಾರ್‌ ಸಿಮ್ಯುಲೇಶನ್ ಸೆಂಟರ್‌ ಉದ್ಘಾಟಿಸುವರು. ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಭಗವಾನ ಬಿ.ಸಿ ಮುಖ್ಯ ಅತಿಥಿಗಳಾಗಿ, ನಹವದೆಹಲಿಯ ಜೆಪ್ಯಾಗೊ ಡೆಪ್ಯೂಟಿ ಕಂಟ್ರಿ ಡೈರೆಕ್ಟರ್‌ ಕಮಲೇಶ ಲಾಲಚಂದಾನಿ, ನವದೆಹಲಿಯ ಲ್ಯಾರ್ಡಲ್ ಮೆಡಿಕಲ್ ಲಿ.ಮ್ಯಾನೇಜಿಂಗ್ ಡೈರೆಕ್ಟರ್ ಸಂಜಯ ಸಿಂಗ್ ಆಹ್ವಾನಿತ ಅತಿಥಿಯಾಗಿ ಪಾಲ್ಗೊಳ್ಳುವರು. ಉದ್ಘಾಟನೆ ಬಳಿಕ ಸಿಮ್ಯುಲೇಶನ್ ಸೆಂಟರ್‌ ನಲ್ಲಿ ಡಿ.5 ರಿಂದ 7 ರವರೆಗೆ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಮ್ಮೇಳನದಲ್ಲಿ ಸಿಮ್ಯುಲೇಶನ್ ಸೆಂಟರ್‌ನಲ್ಲಿರುವ ಮಾದರಿಗಳು ಮತ್ತು ಉಪಕರಣ ಉಪಯೋಗಿಸಿಕೊಂಡು ತರಬೇತಿ ನೀಡಲಾಗುವುದು. ನರ್ಸಿಂಗ್ ವಿಜ್ಞಾನದ ತಜ್ಞರಾದ ಇಂಗ್ಲೆಂಡಿನ ಸಿಕಾಮ್ ಅಕಾಡೆಮಿ ಸಿಇಒ ಕ್ಯಾರಿ ಹ್ಯಾಮಿಲ್ಟನ್, ಸಿಂಗಪುರದ ನರ್ಸಿಂಗ್ ಸ್ಟಡೀಸ್‌ ಡೈರೆಕ್ಟರ್ ಲೌರಾ ಥಾಮ್, ಆಸ್ಟ್ರೇಲಿಯಾದ ಹೆಡ್ ಕೇರ್ ಹಾಗೂ ಅಲ್ವಿನ್ ಟಾಂಗ್‌ನ ಜೆಮ್ಸ್ ನೈಸ್ಮಿಥ್ ವಿಶೇಷ ಉಪನ್ಯಾಸ ಮತ್ತು ಶಿಬಿರಾರ್ಥಿಗಳಿಗೆ ತರಬೇತಿ ನೀಡುವರು. ತರಬೇತಿ ಪಡೆಯಲು ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ 1000ಕ್ಕೂ ಅಧಿಕ ನರ್ಸಿಂಗ್‌ ವೃತ್ತಿಪರರು, ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಹೊಸದಾಗಿ ಅವಿಷ್ಕಾರಗೊಂಡ ನರ್ಸಿಂಗ್ ಚಿಕಿತ್ಸಾ ವಿಧಾನಗಳ ಕುರಿತು ತರಬೇತಿ ನೀಡಲಾಗುವುದು. ಜೊತೆಗೆ ಶಿಬಿರಾರ್ಥಿಗಳು ಮತ್ತು ಸಂಪನ್ಮೂಲ ಪರಿಣಿತರ ನಡುವೆ ಚರ್ಚೆ ಹಾಗೂ ಸಂವಾದ ನಡೆಯಲಿವೆ. ನರ್ಸಿಂಗ್‌ ಕಾಲೇಜಿನ ಅತ್ಯಂತ ಆಧುನಿಕ ಸಿಮ್ಯುಲೇಶನ್ ಸೆಂಟರ್ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತರಬೇತಿ ಕಾರ್ಯಾಗಾರ ಮತ್ತು ಸಮ್ಮೇಳನಗಳನ್ನು ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ಮೂಲಕ ನರ್ಸಿಂಗ್ ಸಿಬ್ಬಂದಿಯಲ್ಲಿ ಚಿಕಿತ್ಸಾ ಕೌಶಲ್ಯ ಹೆಚ್ಚಿಸಲು ಆದ್ಯತೆ ನೀಡಲಾಗುವುದು. ಒಟ್ಟಾರೆ ಈ ಬೆಳವಣಿಗೆ ಸಾರ್ವಜನಿಕರ ಆರೋಗ್ಯ ಸುಧಾರಣೆ ಪ್ರಗತಿಯಲ್ಲಿ ಗಮನಾರ್ಹವಾದ ಪಾತ್ರವಹಿಸಲಿದೆ ಎಂದು ತಿಳಿಸಿದ ಅವರು, ಆರೋಗ್ಯ ವ್ಯವಸ್ಥೆಯಲ್ಲಿ 30.5 ಪ್ರತಿಶತದಷ್ಟಿರುವ ನರ್ಸಿಂಗ್ ಸಿಬ್ಬಂದಿ ಭಾರತದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಆಧಾರ ಸ್ಥಂಭವಾಗಿದ್ದಾರೆ. ವಿಶೇಷವಾಗಿ ಕೊರೋನಾ ನಂತರ ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಹೊಂದಿದ ನರ್ಸಿಂಗ್ ಸಿಬ್ಬಂದಿಯ ಬೇಡಿಕೆ ಹೆಚ್ಚುತ್ತಿದೆ ಎಂದು ತಿಳಿಸಿದರು.ಈ ದಿಸೆಯಲ್ಲಿ ತರಬೇತಿ ಕೇಂದ್ರದ ಅಗತ್ಯವನ್ನರಿತು ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ಅಡಿಯಲ್ಲಿ ಭಾರತೀಯ ನರ್ಸಿಂಗ್ ಪರಿಷತ್ತಿನಿಂದ ಮಾನ್ಯತೆ ಪಡೆದ ಭಾರತದ ಎರಡನೇ ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಸೆಂಟರ್ ಜೊತೆಗೆ ಭಾರತೀಯ ನರ್ಸಿಂಗ್ ಪರಿಷತ್ತು ಇವರ ಮಾನ್ಯತೆ ಹಾಗೂ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾದ ಜೆಪ್ಯಾಗೊ ಅವರ ತಾಂತ್ರಿಕ ಸಹಾಯದೊಂದಿಗೆ ಭಾರತದಲ್ಲಿಯೇ ಪ್ರಥಮ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಕೇಂದ್ರ ಸ್ಥಾಪಿಸಲಾಗಿದೆ.

₹16 ಕೋಟಿ ವೆಚ್ಚದಲ್ಲಿ 22,000 ಸಾವಿರ ಚದುರಡಿಗಳ ವಿಸ್ತೀರ್ಣದಲ್ಲಿ ಸ್ಥಾಪಿಸಲಾದ ಈ ಕೇಂದ್ರ ನರ್ಸಿಂಗ್ ತರಬೇತಿಗೆ ಸಂಬಂಧಿಸಿದಂತೆ ಭಾರತದಲ್ಲಿ ಎರಡನೇ ರಾಷ್ಟ್ರೀಯ ರೆಫರನ್ಸ್ ಸಿಮ್ಯೂಲೇಷನ್ ಸೆಂಟರ್ ಎನ್ನುವುದು ಅಭಿಮಾನ ಸಂಗತಿ. ಈ ಕೇಂದ್ರದಲ್ಲಿ ನರ್ಸಿಂಗ್ ವಿಜ್ಞಾನದ ಬೋಧಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ನರ್ಸಿಂಗ್ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಮಾನವ ದೇಹದ ಮಾದರಿ ಉಪಯೋಗಿಸಿಕೊಂಡು ನರ್ಸಿಂಗ್‌ ವೃತ್ತಿಲ್ಲಿರುವವರಿಗೆ ತರಬೇತಿ ಕೊಡಲಾಗುವುದು. ತರಬೇತಿಗೆ ಅಗತ್ಯವಾದ ಎಲ್ಲ ಪ್ರಕಾರದ ಮಾದರಿಗಳು ಮತ್ತು ವೈದ್ಯಕೀಯ ಉಪಕರಣಗಳು ಸಿಮ್ಯುಲೇಶನ್ ಸೆಂಟರ್ ನಲ್ಲಿ ಲಭ್ಯವಿವೆ. ಬೃಹತ್ ಗಾತ್ರದ ಮಾನಿಟರ್ಗಳನ್ನು ಅಳವಡಿಸಿದ್ದು, ಶಿಬಿರಾರ್ಥಿಗಳು ಸ್ಪಷ್ಟವಾಗಿ ಚಿಕಿತ್ಸಾ ತರಬೇತಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ ಬೇವೂರ, ಪ್ರಾಚಾರ್ಯ ದಿಲೀಪ್ ನಾಟೆಕರ ಉಪಸ್ಥಿತರಿದ್ದರು.