ನ.28 ರಿಂದ ಮೂರು ದಿನ ಬೃಹತ್‌ ಕೃಷಿ ಮೇಳ: ಡಾ.ಹರಿಣಿಕುಮಾರ್

| Published : Oct 09 2025, 02:00 AM IST

ನ.28 ರಿಂದ ಮೂರು ದಿನ ಬೃಹತ್‌ ಕೃಷಿ ಮೇಳ: ಡಾ.ಹರಿಣಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಮೇಳದ ವಸ್ತು ಪ್ರದರ್ಶನದಲ್ಲಿ ಒಟ್ಟು ೩೫೦ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 100 ಹೈಟೆಕ್ ಮಳಿಗೆಗಳು, 220 ಸಾಮಾನ್ಯ, 30 ಸ್ವ-ಸಹಾಯಕ ಸಂಘ, ರೈತ ಉತ್ಪಾದಕ ಕಂಪನಿ ಮತ್ತು ನರ್ಸರಿಯವರಿಗೆ ಮಳಿಗೆಗಳನ್ನು ಮೀಸಲಿರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ವಿ.ಸಿ.ಫಾರಂನಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದಿಂದ ನ.28, 29 ಹಾಗೂ 30 ರಂದು ವಿ.ಸಿ.ಫಾರಂ ಆವರಣದಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಹರಿಣಿಕುಮಾರ್ ಹೇಳಿದರು.

ರೈತರ ಬೆಳೆಯಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಈ ಸಾಲಿನಲ್ಲಿ ಹಲವು ಹೊಸ ತಳಿಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಭತ್ತದ ತಳಿ, ಮುಸುಕಿನ ಜೋಳ, ಹರಳು ತಳಿ, ಬೀಜದ ದಂಟಿನ ತಳಿಯನ್ನು ಪರಿಚಯಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭತ್ತದ ತಳಿಯು ಪ್ರತಿ ಹೆಕ್ಟೇರ್‌ಗೆ 64.08 ಕ್ವಿಂಟಾಲ್ ಇಳುವರಿ ನೀಡಿದರೆ, ಮುಸುಕಿನ ಜೋಳದ ತಳಿ ಪ್ರತಿ ಹೆಕ್ಟೇರ್‌ಗೆ 30 ಕ್ವಿಂಟಾಲ್, ಹರಳು ತಳಿ, ಹೆಕ್ಟೇರ್‌ಗೆ 19.82 ಕ್ವಿಂಟಾಲ್, ಬೀಜದ ದಂಟಿನ ತಳಿ ಹೆಕ್ಟೇರ್‌ಗೆ 20.50 ಕ್ವಿಂಟಾಲ್ ಇಳುವರಿಯನ್ನು ನೀಡಲಿದೆ. ಇವೆಲ್ಲವೂ ಮೌಲ್ಯವರ್ಧಿತ ತಳಿಗಳಾಗಿವೆ ಎಂದರು.

ಕೃಷಿ ಮೇಳದ ವಸ್ತು ಪ್ರದರ್ಶನದಲ್ಲಿ ಒಟ್ಟು ೩೫೦ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 100 ಹೈಟೆಕ್ ಮಳಿಗೆಗಳು, 220 ಸಾಮಾನ್ಯ, 30 ಸ್ವ-ಸಹಾಯಕ ಸಂಘ, ರೈತ ಉತ್ಪಾದಕ ಕಂಪನಿ ಮತ್ತು ನರ್ಸರಿಯವರಿಗೆ ಮಳಿಗೆಗಳನ್ನು ಮೀಸಲಿರಿಸಲಾಗಿದೆ. ವಸ್ತು ಪ್ರದರ್ಶನದಲ್ಲಿ ಜೈವಿಕ ಇಂಧನ, ಮೇವಿನ ಬೆಳೆಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ, ಕೃಷಿ ಯಾಂತ್ರೀಕರಣ ಪ್ರದರ್ಶನ ಮತ್ತು ಮಾರಾಟ, ಜೊತೆಗೆ ವಿಶೇಷ ಆಕರ್ಷಣೆಯಾಗಿ ಖರೀದಿದಾರರು ಮತ್ತು ಮಾರಾಟಗಾರರ ಸಭೆ ಏರ್ಪಡಿಸಲಾಗಿದೆ ಎಂದರು.

ಕೃಷಿ ಸಂಬಂಧಿತ ಮಾಹಿತಿ ಒದಗಿಸುವುದರ ಜೊತೆಗೆ ವಸ್ತು ಪ್ರದರ್ಶನ, ಬೆಳೆ ಪ್ರಾತ್ಯಕ್ಷಿಕೆಗಳು, ಚರ್ಚಾಗೋಷ್ಠಿಗಳು, ತಜ್ಞರಿಂದ ಸಲಹಾ ಸೇವೆ, ಸಾಧಕರಿಗೆ ಕೃಷಿ ಪ್ರಶಸ್ತಿ ಪ್ರದಾನ, ಕಲೆ, ಸಂಸ್ಕೃತಿ ಪ್ರದರ್ಶನಕ್ಕೆ ಸುಂದರ ವೇದಿಕೆಯಾಗಲಿದೆ ಎಂದರು.

ಪ್ರಸ್ತುತ ಯುವ ಪೀಳಿಗೆ ಕೃಷಿಯಿಂದ ವಿಮುಖಗೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದು, ಕೃಷಿ ಸುಸ್ಥಿರ ಬದುಕಿನ ಜೊತೆಗೆ ಲಾಭದಾಯಕ ಉದ್ದಿಮೆ ಎಂದು ತಿಳಿಸಿಕೊಡಲು, ಕೃಷಿ ಮೇಳದಲ್ಲಿ ನವೋದ್ಯಮಗಳ ಬಗ್ಗೆ ಜ್ಞಾನ ಮೂಡಿಸುವುದರೊಂದಿಗೆ ಅಭಿವೃದ್ಧಿ ಇಲಾಖೆಗಳು, ಕೃಷಿ ಸಂಬಂಧಿತ ಸಂಸ್ಥೆಗಳು ಒದಗಿಸುವ ಸಹಕಾರ, ಸೌಲಭ್ಯಗಳ ಮಾಹಿತಿ ಹಾಗೂ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕೃಷಿಯ ಮೂಲ ಪರಿಕರಗಳಾದ ಬಿತ್ತನೆ ಬೀಜ ಉತ್ಪಾದನೆ, ಸಂಸ್ಕರಣೆ, ಸುಧಾರಿತ ಬೆಳೆಗಳ ಬಿತ್ತನೆ ಬೀಜ, ಲಭ್ಯತೆ, ಅವುಗಳ ಬೇಸಾಯ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ ತಾಕುಗಳನ್ನು ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಡಾ.ಜಿ.ಎಂ.ದೇವಗಿರಿ, ಡಾ.ರಾಮಚಂದ್ರ, ಡಾ.ಎನ್.ಶಿವಕುಮಾರ್, ಡಾ.ಡಿ.ರಂಗನಾಥ್ ಇತರರಿದ್ದರು.

ತಳಿಗಳ ವಿಶೇಷತೆಗಳು

ಭತ್ತದ ತಳಿ (ಎಂಎಸ್‌ಎನ್-೧೧೩)

ಈ ತಳಿಯನ್ನು ಕರ್ನಾಟಕದ ಆರನೇ ಒಣ ವಲಯಕ್ಕೆ ಶಿಫಾರಸ್ಸು ಮಾಡಲಾಗಿದೆ. ಮುಂಗಾರು (ಜುಲೈ-ಸೆಪ್ಟೆಂಬರ್) ಮತ್ತು ಬೇಸಿಗೆ (ಜನವರಿ) ಎರಡೂ ಕಾಲಗಳಲ್ಲಿ ಬೆಳೆಯಬಹುದು. ಮಧ್ಯಮಾವಧಿ೦ ಗುಂಪಿಗೆ ಸೇರಿದ್ದು ೧೨೦ ರಿಂದ ೧೨೫ ದಿನಗಳಲ್ಲಿ ಬೆಳೆ ಸಂಪೂರ್ಣಗೊಳ್ಳುತ್ತದೆ. ಸಸ್ಯಗಳು ಸುಮಾರು ೧೦೦ ರಿಂದ ೧೧೦ ಸೆಂ.ಮೀ. ಎತ್ತರ ಬೆಳೆಯುತ್ತವೆ. ಈ ತಳಿಯು ಸಣ್ಣ ಕಾಳನ್ನು ಹೊಂದಿದೆ. ಪ್ರತಿ ಹೆಕ್ಟೇರ್‌ಗೆ ೬ ರಿಂದ ೬.೫ ಟನ್ ಉತ್ಪಾದನೆಯಾಗಲಿದೆ.

ಹರಳು ತಳಿ

ಒಣ ಬೇಸಾಯಕ್ಕೆ ಸೂಕ್ತವಾದ ಮಧ್ಯಮಾವಧಿ ತಳಿ. ಪ್ರತಿ ಹೆಕ್ಟೇರ್‌ಗೆ ೧೨ ರಿಂದ ೧೫ ಕ್ವಿಂಟಾಲ್ ಉತ್ಪಾದನೆಯಾಗಲಿದೆ. ಹೆಚ್ಚಿನ ಎಣ್ಣೆ ಅಂಶವನ್ನು (ಶೇ.೪೬ರಿಂದ ೪೮ರಷ್ಟು) ಹೊಂದಿದೆ. ಮುಳ್ಳು ಸಹಿತ ಕಾಯಿಗಳುಳ್ಳ ಗಿಡಗಳ ಕಾಂಡವು ಹಸಿರು ವರ್ಣದ್ದಾಗಿದ್ದು, ಕಾಂಡ, ಎಲೆಯ ಕೆಳಭಾಗ ಮತ್ತು ಎಲೆಯ ಮೇಲ್ಭಾಗದಲ್ಲಿ ಬೂದಿ ಮುಚ್ಚಣಿಕೆಯನ್ನು ಕಾಣಬಹುದು. ಪ್ರಥಮ ಗೊಂಚಲು ಮಾಗಲು ೧೦೫ ರಿಂದ ೧೧೨ ದಿನಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಕಾಳು ಸಿಡಿಯುವಿಕೆ ನಿರೋಧಕತೆಯನ್ನು ಹೊಂದಿದೆ. ಹೆಚ್ಚು ಪರಿಣಾಮಕಾರಿ ಗೊನೆಗಳ ಸಂಖ್ಯೆ, ಪ್ರತಿ ಗೊನೆಗಳಲ್ಲಿ ಹೆಚ್ಚು ಕಾಯಿಗಳ ಸಂಖ್ಯೆ ಮತ್ತು ಪ್ರತಿ೦ ಗೊನೆಗಳಲ್ಲಿ ಕಡಿಮೆ ಗಂಡು ಹೂಗಳ ಸಂಖ್ಯೆಯನ್ನು ಹೊಂದಿದೆ.

ಮುಸುಕಿನ ಜೋಳದ ರೇಷ್ಮೆ

ಮುಸುಕಿನ ಜೋಳವು ಏಕಧಾನ್ಯ ಬೆಳೆಯಾಗಿದ್ದು, ಭಾರತ ದೇಶದ ಉತ್ಪಾದನೆಯಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ. ಎಲ್ಲಾ ಬಗೆಯ ಮುಸುಕಿನ ಜೋಳದ ತೆನೆಯ ತುದಿಗೆ ಇರುವ ರೇಷ್ಮೆ ನೂಲಿನಂತಿರುವ ಮೃದುವಾದ ಎಳೆಗಳು ೧೦ ರಿಂದ ೨೦ ಸೆಂ.ಮೀ. ಉದ್ದವಿದೆ. ತಿಳಿ ಹಸಿರು, ಹಳದಿ ಅಥವಾ ಕಂದುಬಣ್ಣವನ್ನು ಹೊಂದಿರುತ್ತವೆ. ಸಿಹಿ ಮುಸುಕಿನ ಜೋಳದ ರೇಷ್ಮೆಯಲ್ಲಿ ಪ್ರಮುಖ ಪೋಷಕಾಂಶಗಳಾದ ಶರ್ಕರ ಪಿಷ್ಠ, ಸಸಾರಜನಕ, ಕರಗುವ ನಾರು, ಖನಿಜಾಂಶಗಳು ಹಾಗೂ ವಿವಿಧ ಜೀವಸತ್ವಗಳನ್ನು ಹೊಂದಿದೆ. ಅನೇಕ ಜೈವಿಕ ಕ್ರಿಯಾಶೀಲ ಅಂಶಗಳಾದ ಫಿನಾಲಿಕ್ ಸಂಯುಕ್ತಗಳು, ಫ್ಲೇವನಾಯ್ಡುಗಳು, ಪೆಪ್ಪೈಡ್‌ಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳನ್ನು ಒಳಗೊಂಡಿದೆ. ಆರೋಗ್ಯಕಾರಿ ಅಂಶಗಳಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ. ಈಮುಸುಕಿನ ಜೋಳದ ರೇಷ್ಮೆ ಚಹಾವನ್ನು ತ್ವರಿತ ಮತ್ತು ಸುಲಭವಾಗಿ ತಯಾರಿಸಬಹುದು. ಅಲ್ಲದೆ, ಪುಷ್ಠೀಕರಿಸಿದ ರೋಟಿ ಮಿಶ್ರಣ ತಯಾರಿಸಲು ಸುಲಭ ಮತ್ತು ರುಚಿಕರವಾಗಿದೆ. ಇದರಿಂದ ರೊಟ್ಟಿ, ದೋಸೆ, ತಾಲಿಪಟ್ಟು ಮುಂತಾದ ಆಹಾರ ತಯಾರಿಸಬಹುದು.

ಬೀಜದ ದಂಟಿನ ತಳಿ

ಈ ತಳಿಯನ್ನು ಪ್ರತಿ ಹೆಕ್ಟೇರ್‌ಗೆ ೨೦.೫೦ ಕ್ವಿಂಟಾಲ್ ಬೆಳೆಯಬಹುದು. ಸದೃಢವಾದ ಕಾಂಡವನ್ನು ಹೊಂದಿದ್ದು ಹೆಚ್ಚು ಬಾಗುವುದಿಲ್ಲ. ಶೇ.೧೪ರಷ್ಟು ಬೀಜದ ಇಳುವರಿಯನ್ನು ಕೊಡುತ್ತದೆ. ಈ ಬೀಜದ ದಂಟಿನ ತಳಿಯನ್ನು ರಾಗಿಯೊಂದಿಗೆ ಬೆರೆಸಿ ಹಿಟ್ಟು ಮಾಡಿ ಸೇವಿಸಬಹುದು ಅತ್ಯುತ್ತಮವಾದ ಪೋಷಕಾಂಶಗಳನ್ನು ಇದು ಒಳಗೊಂಡಿದೆ.