ಶ್ರೀರಂಗಪಟ್ಟಣ ದಸರಾಗೆ ಮೂರು ಆನೆಗಳು

| Published : Oct 14 2023, 01:00 AM IST

ಸಾರಾಂಶ

ಅ.೧೬ ರಿಂದ ೧೮ ರವರೆಗೆ ಶ್ರೀರಂಗಪಟ್ಟಣ ದಸರಾ ಉತ್ಸವ ನಡೆಯಲಿದೆ. ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ದಸರಾಗೆ ಚಾಲನೆ ನೀಡುವರು.
ಶ್ರೀರಂಗಪಟ್ಟಣ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಅ.೧೬ ರಿಂದ ೧೮ ರವರೆಗೆ ಶ್ರೀರಂಗಪಟ್ಟಣ ದಸರಾ ಉತ್ಸವ ನಡೆಯಲಿದೆ. ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿವೆ. ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ದಸರಾಗೆ ಚಾಲನೆ ನೀಡುವರು. ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಅ.೧೬ ರಂದು ಮಧ್ಯಾಹ್ನ ೧೨.೩೦ ಕ್ಕೆ ನಂದಿಧ್ವಜ ಪೂಜೆ ಹಾಗೂ ಮಧ್ಯಾಹ್ನ ೨.೩೦ ರಿಂದ ೩.೧೫ ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ನೆರವೇರಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಮಹೇಂದ್ರ ಹೆಸರಿನ ಆನೆ ಅಂಬಾರಿ ಹೊತ್ತು ಮುನ್ನಡೆದರೆ ವಿಜಯ, ವಿಜಯಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ. ವಿವಿಧ ಕಲಾತಂಡಗಳಾದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ದ ಚಿತ್ರಗಳ ಮೆರವಣಿಗೆ ನಡೆಯಲಿದೆ. ಶ್ರೀರಂಗನಾಥ ಸ್ವಾಮಿ ದೇವಾಲಯ ಆವರಣದಲ್ಲಿ ನಿರ್ಮಿಸಿರುವ ಶ್ರೀರಂಗ ವೇದಿಕೆಯಲ್ಲಿ ಅ.೧೬ ರಂದು ಸಂಜೆ ೬ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ನೆರವೇರಿಸುವರು. ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಹೆಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಶಿವರಾಜ್ ತಂಗಡಗಿ, ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ್, ಬಿ.ನಾಗೇಂದ್ರ, ಸಂಸದೆ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳೀಗೌಡ, ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ, ಪಿ. ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ ಮಂಜು, ಕೆ.ಎಂ ಉದಯ್ ಹಾಗೂ ಕಿರಂಗೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಎಚ್.ಪಿ.ಶ್ರುತಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳು: ಅ.೧೬ರಂದು ದಸರಾ ಮ್ಯಾರಥಾನ್ ಓಟ, ಬಾಬುರಾಯನಕೊಪ್ಪಲಿನಲ್ಲಿರುವ ಭಾರತಿ ಚಿತ್ರಮಂದಿರದಲ್ಲಿ ಎಳೆಯರು ನಾವು ಗೆಳೆಯರು, ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ಕಾಂತಾರ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಾತ್ರಿ ೮ ಗಂಟೆಗೆ ಬೆಂಗಳೂರು ಪ್ರಭಾತ್ ಕಲಾವಿದರು, ರಾತ್ರಿ ೯ಕ್ಕೆ ರಘು ದೀಕ್ಷಿತ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಅ.೧೭ರಂದು ಬೆಳಗ್ಗೆ ೬ ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗ ಯೋಗ ಪ್ರದರ್ಶನ ನಡೆಯಲಿದೆ. ಬೆಳಗ್ಗೆ ೭ ಗಂಟೆಗೆ ಕರೀಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರೆಗೆ ೨೯ ವರ್ಷ ಒಳಗಿನವರಿಗೆ ಮತ್ತು ೩೦ ವರ್ಷ ಮೇಲ್ಪಟ್ಟವರಿಗೆ ಚಾರಣ ಸ್ಪರ್ಧೆ ಏರ್ಪಡಿಸಿದೆ. ಬೆಳಗ್ಗೆ ೧೦ ರಿಂದ ೧೨.೩೦ ರವರೆಗೆ ಇಂಗಳೆ ಮಾರ್ಗ, ರಾಜಕುಮಾರ ಚಿತ್ರ ಪ್ರದರ್ಶನಗೊಳ್ಳಲಿವೆ. ೧೦ ಗಂಟೆಗೆ ಬಾಲ್ಯ ವಿವಾಹ ನಿಷೇಧ ಕುರಿತ ಗೀತೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಕುರಿತ ನಾಟಕ ಮತ್ತು ಜನಪದ ನೃತ್ಯ ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕವಿಗೋಷ್ಠಿ, ೩ ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯ ನಡೆಯಲಿದೆ. ಮಧ್ಯಾಹ್ನ ೩ ಗಂಟೆಯಿಂದ ಭರತನಾಟ್ಯ, ಜಾನಪದ ಗೀತೆ, ತಂಬೂರಿ ಕಥೆಗಳು, ಭಕ್ತಿಗೀತೆ, ಸಾಮೂಹಿಕ ನೃತ್ಯ, ಕರಗದ ಕೋಲಾಟ, ಸಂಜೆ ಸುಗಮ ಸಂಗೀತ, ಸೂತ್ರದ ಬೊಂಬೆಯಾಟ, ಪಿಯಾನೋ, ನಾದಸ್ವರ, ಭಜನ, ಯೋಗ ನೃತ್ಯರೂಪಕ, ಜಾನಪದ ಝೇಂಕಾರ, ಕನ್ನಡ ಜನಪದ ಸಂಗೀತ ನಡೆಯಲಿದೆ. ಸಂಜೆ ೭ ಗಂಟೆಗೆ ಕುನಲ್ ಗಂಜವಾಲ್ ಮತ್ತು ತಂಡ ಮತ್ತು ರಾತ್ರಿ ೯ ಗಂಟೆಗೆ ಆಲ್‌ಓಕೆ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.೧೮ರಂದು ಬೆಳಗ್ಗೆ ೧೦ಕ್ಕೆ ರೈತ ದಸರಾ ಮತ್ತು ವಿಚಾರ ಸಂಕಿರಣ, ಬೆಳಗ್ಗೆ ೧೦ ರಿಂದ ಬಾಬುರಾಯನಕೊಪ್ಪಲು ಭಾರತಿ ಚಿತ್ರಮಂದಿರದಲ್ಲಿ ಸಚಿನ್ ತೆಂಡೂಲ್ಕರ್ ಅಲ್ಲ, ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ನಾಗರಹಾವು ಚಿತ್ರ ಪ್ರದರ್ಶನವಾಗಲಿದೆ. ಮಧ್ಯಾಹ್ನ ೨ಕ್ಕೆ ವಿಚಾರಗೋಷ್ಠಿ, ಭರತನಾಟ್ಯ, ಸಂಗೀತ, ಜಾನಪದಗೀತೆ, ಭಕ್ತಿಗೀತೆ, ಕೀರ್ತನೆಗಳು, ಸ್ಯಾಕ್ಸೋಫೋನ್, ನಾದಸ್ವರ, ಯೋಗನಮನ, ಹಿಂದೂಸ್ತಾನಿ ಸಂಗೀತ, ಕುವೆಂಪು ಗೀತಗಾಯನ, ನಾಡು-ನುಡಿ ಸ್ವರೋತ್ಸವ, ತತ್ವಪದ, ದಾಸರಪದ, ವಚನಗಾಯನ ನಡೆಯಲಿದೆ. ರಾತ್ರಿ ೮ ಗಂಟೆಗೆ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಆಹಾರಮೇಳ: ದಸರಾ ಪ್ರಯುಕ್ತ ಅ.೧೬ರಿಂದ ೧೮ರವರೆಗೆ ಬೆಳಗ್ಗೆ ೧೦ ಗಂಟೆಯಿಂದ ಮಂಡ್ಯ ಸಾಂಸ್ಕೃತಿಕ ಸೊಗಡನ್ನು ಪ್ರತಿಬಿಂಬಿಸುವ ಬೆಲ್ಲದ ಖಾದ್ಯಗಳು, ಮೇಲುಕೋಟೆ ಪುಳಿಯೋಗರೆ, ಗಂಜಾಂ ಗುಲ್ಕನ್ ಉತ್ಪನ್ನಗಳು ಹಾಗೂ ಕರ್ನಾಟಕದ ಪ್ರಸಿದ್ಧ ಖಾದ್ಯಗಳಾದ ದಾವಣಗೆರೆ ಬೆಣ್ಣೆ ದೋಸೆ, ಬಂಗಾರಪೇಟೆ ಚಾಟ್ಸ್, ಬೆಳಗಾವಿ ಕುಂದ, ಮಂಗಳೂರು ಬೋಂಡಾ, ಮಿರ್ಚಿ ಮಂಡಕ್ಕಿ, ರೊಟ್ಟಿ ಖಾದ್ಯಗಳ ಅನಾವರಣ ಮತ್ತು ಮಾರಾಟ ನಡೆಯಲಿದೆ.