ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ರಾಜ್ಯದಲ್ಲಿ ಬರುವ ಮಾರ್ಚ್-ಏಪ್ರಿಲ್‌ನಲ್ಲಿ ನಡೆಯುವ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ‘ಪರೀಕ್ಷೆ-1’ಕ್ಕೆ 8,96,271 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿ ‘ಪರೀಕ್ಷೆ-1’ಕ್ಕೆ 6,98,624 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಪ್ರಸಕ್ತ ಸಾಲಿನಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಎರಡರಲ್ಲೂ ವರ್ಷದಲ್ಲಿ ಒಂದೆರಡು ತಿಂಗಳ ಅಂತರದಲ್ಲೇ (ಮಾರ್ಚ್‌ನಿಂದ ಮೇವರೆಗೆ) ಮೂರು ಬಾರಿ ಪರೀಕ್ಷೆ (ಪರೀಕ್ಷೆ -1, 2, 3) ನಡೆಸಲಾಗುತ್ತದೆ. ಈ ಮೂರರಲ್ಲಿ ಯಾವುದರಲ್ಲಿ ಅತಿ ಹೆಚ್ಚು ಅಂಕಗಳು ಬರುತ್ತವೋ ಅದನ್ನು ವಿದ್ಯಾರ್ಥಿ ತನ್ನ ಫಲಿತಾಂಶವಾಗಿ ಉಳಿಸಿಕೊಳ್ಳಬಹುದು. ಹಾಗಂತ ವಿದ್ಯಾರ್ಥಿಗಳು ಮೂರೂ ಪರೀಕ್ಷೆ ಬರೆಯಬೇಕೆಂಬುದು ಕಡ್ಡಾಯವಲ್ಲ. ಮೂರರಲ್ಲಿ ಯಾವುದಾದರೂ ಒಂದು, ಇಲ್ಲವೇ ಎರಡು ಪರೀಕ್ಷೆಯನ್ನು ಬೇಕಾದರೂ ಬರೆಯಬಹುದು ಅಥವಾ ಮೂರನ್ನೂ ಬರೆಯಬಹುದು. ಅದು ವಿದ್ಯಾರ್ಥಿಗಳ ಇಚ್ಛೆ. ಆದರೆ, ಯಾವುದೇ ಪರೀಕ್ಷೆ ಬರೆಯಲು ಪರೀಕ್ಷೆ-1ಕ್ಕೆ ನೋಂದಣಿ ಮಾಡಿಕೊಂಡಿರುವುದು ಕಡ್ಡಾಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮಾ.1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಮತ್ತು ಮಾ.25ರಿಂದ ಏ.6ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಲು ಕಳೆದ ಜನವರಿಯಲ್ಲೇ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ರಾಜ್ಯಾದ್ಯಂತ ಒಟ್ಟು 1124 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮತ್ತು 2747 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಪಿಯು ಪರೀಕ್ಷೆಗೆ 3.30 ಲಕ್ಷ ಬಾಲಕರು, 3.67 ಲಕ್ಷ ಬಾಲಕಿಯರು, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 4.58 ಲಕ್ಷ ಬಾಲಕರು ಮತ್ತು 4.37 ಲಕ್ಷ ಬಾಲಕಿಯರು ನೋಂದಾಯಿಸಿದ್ದಾರೆ ಎಂದು ವಿವರಿಸಿದರು.ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ಸಿಸಿಟಿವಿ ಕಣ್ಗಾವಲು, ಬಿಗಿ ಭದ್ರತೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಉನ್ನತ ಶಿಕ್ಷಣಕ್ಕೆ ಬರಬೇಕು. ಅನುತ್ತೀರ್ಣ ಪ್ರಮಾಣ ಕಡಿಮೆಯಾಗಬೇಕು. ಅನುತ್ತೀರ್ಣಗೊಂಡು ವಿದ್ಯಾರ್ಥಿಗಳು ಬೇರೆ ದಾರಿ ಹಿಡಿಯಬಾರದು ಎಂಬ ಉದ್ದೇಶದಿಂದ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ನಡೆಸುವ ಹೊಸ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ದ್ವಿತೀಯ ಪಿಯುಸಿ ಪರೀಕ್ಷೆ-2 ಏಪ್ರಿಲ್ ಕೊನೆಯ ವಾರದಲ್ಲಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ -2 ಅನ್ನು ಮೇ ಮೂರನೇ ವಾರದಲ್ಲಿ ನಡೆಸಲಾಗುವುದು. ಅದೇ ರೀತಿ ಪರೀಕ್ಷೆ 3ನ್ನು ಮೇ ಮಾಸಾಂತ್ಯ ಹಾಗೂ ಜೂನ್ ಆರಂಭದಲ್ಲಿ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.ಮೂರೂ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದ ಒಂದು ತಿಂಗಳ ಒಳಗೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲಾಗುವುದು. ಡಿಜಿ ಲಾಕರ್‌ನಲ್ಲೂ ತಮ್ಮ ಅಂಕಪಟ್ಟಿ ಪಡೆದುಕೊಳ್ಳಬಹುದು. ಪರೀಕ್ಷೆ-1ನ್ನು ಮಾತ್ರ ಬರೆದು ಎರಡು, ಮೂರನೇ ಪರೀಕ್ಷೆ ಬರೆಯಲಿಚ್ಚಿಸದವರಿಗೆ 15ರಿಂದ 20 ದಿನಗಳಲ್ಲಿ ಅಂಕಪಟ್ಟಿ ನೀಡಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದರು.
ಪರೀಕ್ಷೆಗೆ ವಸ್ತ್ರಸಂಹಿತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಸೆಸ್ಸೆಲ್ಸಿ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ ಬರಬಹುದು. ಸಮಸ್ಯೆ ಇಲ್ಲ. ಆದರೆ, ಪಿಯುಸಿ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲೂ ಸಮವಸ್ತ್ರ ಇಲ್ಲದ ಕಾರಣ ನ್ಯಾಯಾಲಯದ ತೀರ್ಪಿನಂತೆ ಕ್ರಮ ವಹಿಸಲಾಗುವುದು. ಹಿಜಾಬ್ ಧರಿಸಿ ಬರಲು ಅವಕಾಶವಿದೆಯಾ ಎಂಬ ಬಗ್ಗೆ, ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದ್ದು ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಮುಂದುವರಿಯಲಾಗುವುದು ಎಂದರು.ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಆಯುಕ್ತೆ ಬಿ.ಬಿ.ಕಾವೇರಿ ಹಾಗೂ ಕೆಎಸ್‌ಇಎಬಿ ಅಧ್ಯಕ್ಷೆ ಮಂಜುಶ್ರೀ, ಪರೀಕ್ಷಾ ನಿರ್ದೇಶಕ ಗೋಪಾಲಕೃಷ್ಣ ಇತರೆ ಅಧಿಕಾರಿಗಳಿದ್ದರು. ಸುಮಾರು 52 ಪ್ರೌಢಶಾಲೆಗಳು ನಿಯಮಾನುಸಾರ ಸರ್ಕಾರದಿಂದ ಮಾನ್ಯತೆ ಪಡೆಯದೆ, ನವೀಕರಣ ಮಾಡಿಕೊಳ್ಳದೆ ಮಕ್ಕಳನ್ನು ದಾಖಲಿಸಿಕೊಂಡು ಪಾಠ ಮಾಡಿವೆ. ಅಂತಹ ಶಾಲೆಗಳ ಎಸ್ಸೆಸ್ಸೆಲ್ಸಿಯ 5000 ವಿದ್ಯಾರ್ಥಿಗಳನ್ನು ನೆರೆ ಹೊರೆಯ ಶಾಲೆಗಳಿಗೆ ವರ್ಗಾವಣೆ ಮಾಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಆ ಶಾಲೆಗಳಿಗೆ ಮಾನ್ಯತೆ ನೀಡದಿರಲು ಕೂಡ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಟ್ಟಡ ಸುರಕ್ಷತೆ, ಅಗ್ನಿ ಸುರಕ್ಷತೆ ಸೇರಿದಂತೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಂದಿರುವ ಮಾನದಂಡಗಳನ್ನು ಶಾಲೆಗಳು ಅನುಸರಿಸುವುದು ಕಡ್ಡಾಯ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವುದಿಲ್ಲ ಎಂದು ಅವರು ಹೇಳಿದರು.