ಮೂವರು ರೈತರಿಂದ ವಿಷ ಸೇವಿಸಿ ಆತ್ಮಹತ್ಯೆ ವಿಫಲ ಯತ್ನ

| Published : Sep 17 2025, 01:05 AM IST

ಸಾರಾಂಶ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಗಳವಾರ ಇಬ್ಬರು ರೈತ ಮಹಿಳೆ ಸೇರಿದಂತೆ ಮೂವರು ರೈತರು ವಿಷ ಸೇವಿಸಲು ವಿಫಲ ಯತ್ನ ನಡೆಸಿದ ಘಟನೆ ಜರುಗಿತು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಂಗಳವಾರ ಇಬ್ಬರು ರೈತ ಮಹಿಳೆ ಸೇರಿದಂತೆ ಮೂವರು ರೈತರು ವಿಷ ಸೇವಿಸಲು ವಿಫಲ ಯತ್ನ ನಡೆಸಿದ ಘಟನೆ ಜರುಗಿತು.

ರೈತರಾದ ಚಿಕ್ಕಬೈರಮಂಗಲ ಗ್ರಾಮದ ನಾಗೇಶ್ ಕುಮಾರ್, ಕಂಚುಗಾರನಹಳ್ಳಿ ಗ್ರಾಮದ ಶಾರದಮ್ಮ, ಹೊಸೂರು ರಮ್ಯಾ ಎಂಬುವವರು ವಿಪಕ್ಷ ನಾಯಕ ಆರ್ .ಅಶೋಕ್ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣರವರ ಸಮ್ಮುಖದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾದರು. ಕೂಡಲೇ ಅವರನ್ನು ಸ್ಥಳೀಯ ಬೈರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ತಾಲೂಕಿನ ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ನೂರಾರು ರೈತರು ಕಳೆದ ಆರು ದಿನಗಳಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಪ್ರತಿ ನಿತ್ಯ ವಿವಿಧ ಪಕ್ಷಗಳ ನಾಯಕರು ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಭಾಗವಹಿಸಿದ್ದಾರೆ.

ಅದರಂತೆ ಮಂಗಳವಾರ ಬಿಜೆಪಿ ನಾಯಕರಾದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಸಂಸದ ಡಾ.ಸಿ.ಎನ್.ಮಂಜುನಾಥ್ ರವರು ಧರಣಿಯಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣರವರು ಚಳವಳಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಮಯದಲ್ಲಿ ವೇದಿಕೆ ಮುಂಭಾಗದಲ್ಲಿಯೇ ನಿಂತಿದ್ದ ರೈತರಾದ ನಾಗೇಶ್ ಕುಮಾರ್ , ಶಾರದಮ್ಮ ಹಾಗೂ ರಮ್ಯಾ ಅವರು ಜೊತೆಯಲ್ಲಿ ತಂದಿದ್ದ ಕೀಟ ನಾಶಕವನ್ನು ಸೇವಿಸಲು ಮುಂದಾಗಿದ್ದಾರೆ.

ಇದನ್ನು ಗಮನಿಸಿದ ಪಕ್ಕದಲ್ಲಿದ್ದ ರೈತರು ಕೂಡಲೇ ಮೂವರ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಸಿದುಕೊಂಡಿದ್ದಾರೆ. ನಾಗೇಶ್ ಕುಮಾರ್ ವಿಷ ಸೇವಿಸಿದರೆ, ಶಾರದಮ್ಮ ಮತ್ತು ರಮ್ಯಾ ಅವರನ್ನು ವಿಷ ಕುಡಿಯುವುದರಿಂದ ತಪ್ಪಿಸಲಾಯಿತು. ಅಸ್ವತ್ಥಗೊಂಡ ನಾಗೇಶ್ ಕುಮಾರ್ ಅವರನ್ನು ಕೂಡಲೇ ಪೊಲೀಸ್ ವಾಹನದಲ್ಲಿ ಬೈರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ.

ಮೂವರು ರೈತರು ವಿಷ ಸೇವಿಸಲು ಮುಂದಾದ ಘಟನೆಯಿಂದಾಗಿ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಕ್ರೋಶದ ಕಟ್ಟೆ ಹೊಡೆದು ರೈತರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.

ಈ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ , ನಮ್ಮ ಪೂರ್ವಿಕರು ಬೆವರಲ್ಲ, ರಕ್ತ ಸುರಿಸಿ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ನಮ್ಮ ಜೀವನವೇ ಭೂಮಿಯನ್ನು ಅವಲಂಬಿಸಿದೆ. ವಿಷ ಕುಡಿಯುವುದರಿಂದ ಅಥವಾ ಬೆಂಕಿ ಹಚ್ಚಿಕೊಳ್ಳುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಒಗ್ಗಟ್ಟಿನ ಹೋರಾಟದಿಂದ ಮಾತ್ರ ಫಲವತ್ತಾದ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನಾವುಗಳು ಸ್ವಾರ್ಥಕ್ಕಾಗಿ ಬಂದಿಲ್ಲ. ಜನಪ್ರತಿನಿಧಿಗಳಾದ ನಾವುಗಳು ಜನರ ಪರವಾಗಿ ನಿಲ್ಲಬೇಕೆಂದು ಬಂದಿದ್ದೇವೆ. ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಒಗ್ಗಟ್ಟಾಗಿರುವ ಶಪಥ ಮಾಡಿ ಹೋರಾಟ ಬಲಿಷ್ಠಗೊಳಿಸಬೇಕು. ಆತ್ಮಹತ್ಯೆ ಅಂತಹ ನಿರ್ಧಾರಕ್ಕೆ ಯಾರೂ ಬರಬಾರದು. ಜೀವ ಕಳೆದುಕೊಳ್ಳಲು ಅಲ್ಲ, ಬದುಕು ಕಟ್ಟಿಕೊಳ್ಳಲು ಚಳವಳಿ ನಡೆಸುತ್ತಿದ್ದೇವೆ ಎಂದು ರೈತರಿಗೆ ಕಿವಿಮಾತು ಹೇಳಿದರು.

16ಕೆಆರ್ ಎಂಎನ್ 1,2.ಜೆಪಿಜಿ

ಬೈರಮಂಗಲ ವೃತ್ತದಲ್ಲಿ ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಮಂಗಳವಾರ ನಡೆದ ಚಳವಳಿಯಲ್ಲಿ ಮೂವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.