ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ₹374.72 ಕೋಟಿ ವಹಿವಾಟು

| Published : Feb 22 2024, 01:53 AM IST

ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ₹374.72 ಕೋಟಿ ವಹಿವಾಟು
Share this Article
  • FB
  • TW
  • Linkdin
  • Email

ಸಾರಾಂಶ

arakalgud, tobacco, tobacco auction, auction, market, ಅರಕಲಗೂಡು, ತಂಬಾಕು, ತಂಬಾಕು ಹರಾಜು, ಹರಾಜು, ಮಾರುಕಟ್ಟೆ

ಕೆಜಿ ತಂಬಾಕಿಗೆ ಸರಾಸರಿ 255 ರು. ಬೆಲೆಯಲ್ಲಿ ಹರಾಜು । ಕೆಜಿ ಹೊಗೆಸೊಪ್ಪಿನ ಬೆಲೆ ಗರಿಷ್ಠ 290 ರು. । ಮಾರುಕಟ್ಟೆ ಇತಿಹಾಸದಲ್ಲಿ ದಾಖಲೆ

ಶೇಖರ್ ವೈ. ಡಿ.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಪ್ರಸಕ್ತ ಸಾಲಿನ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು 374.72 ಕೋಟಿ ರು. ದಾಖಲೆಯ ವಹಿವಾಟು ನಡೆದಿದೆ.

ಪ್ರಸಕ್ತ ಸಾಲಿಗೆ ಪ್ಲಾಟ್ ಫಾರಂ 7ರಲ್ಲಿ 102 ದಿನಗಳ ಕಾಲ ನಡೆದ ಇ- ಹರಾಜು ಪ್ರಕ್ರಿಯೆಯಲ್ಲಿ 8.07 ಮಿಲಿಯನ್ ಕೆಜಿ ತಂಬಾಕು ಖರೀದಿಸಲಾಗಿದ್ದು 205.7 ಕೋಟಿ ರು. ವಹಿವಾಟು ನಡೆದಿದೆ. ಗುಣಮಟ್ಟದ ಒಂದು ಕೆಜಿ ಹೊಗೆಸೊಪ್ಪಿನ ಬೆಲೆ ಗರಿಷ್ಠ 290 ರು. ಹಾಗೂ ಕನಿಷ್ಠ 200 ರು.ಗೆ ಮಾರಾಟವಾಗಿದೆ. ರೈತರಿಗೆ ಸರಾಸರಿ 255 ರು.ದರ ದೊರೆತಿದೆ.

ಕಳೆದ ಸಾಲಿನಲ್ಲಿ 5.9 ಮಿಲಿಯನ್ ಕೆಜಿ ಹೊಗೆಸೊಪ್ಪು ಕೊಳ್ಳಲಾಗಿದ್ದು 135 ಕೋಟಿ ರು. ವಹಿವಾಟು ನಡೆಸಲಾಗಿತ್ತು. ಉತ್ತಮ ದರ್ಜೆಯ ಒಂದು ಕೆಜಿಗೆ 270 ರು ಮತ್ತು ಕನಿಷ್ಠ ದರ್ಜೆಯ ತಂಬಾಕಿಗೆ 160 ರು. ಬೆಲೆ ದೊರೆತಿತ್ತು. ಸರಸಾರಿ 229 ರು. ದರ ದೊರಕಿತ್ತು. ಈ ಬಾರಿ ಅಧಿಕ ವಹಿವಾಟು ನಡೆಯುವ ಜತೆಗೆ ರೈತರಿಗೆ ಉತ್ತಮ ಬೆಲೆ ದೊರೆತಿದೆ.

ಪ್ಲಾಟ್ ಫಾರಂ 63ರಲ್ಲಿ ಪ್ರಸಕ್ತ ವರ್ಷ 95 ದಿನಗಳ ಕಾಲ ನಡೆದ ಹರಾಜಿನಲ್ಲಿ 6.79 ಮಿಲಿಯನ್ ಕೆಜಿ ಹೊಗೆಸೊಪ್ಪು ಕೊಳ್ಳಲಾಗಿದ್ದು 196.63 ಕೋಟಿ ರು. ವಹಿವಾಟು ಮಾಡಿದೆ. ಉತ್ತಮ ದರ್ಜೆಯ ಒಂದು ಕೆಜಿ ಹೊಗೆಸೊಪ್ಪು 290 ರು. ಮತ್ತು ಕನಿಷ್ಠ 100 ರು.ಗೆ ಕೊಳ್ಳಲಾಗಿದೆ. ಸರಾಸರಿ 253 ರು. ದರ ದೊರೆತಿದೆ. ಕಳೆದ ವರ್ಷ 102.22 ಕೋಟಿ ರು. ವಹಿವಾಟ ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರುಕಟ್ಟೆಯ ಇತಿಹಾಸದಲ್ಲೇ ಈ ಸಲ ದಾಖಲೆಯ ವಹಿವಾಟು ನಡೆದಿದೆ.

ಬೆಳೆಗಾರರ ಕೈ ಹಿಡಿದ ಹೊಗೆಸೊಪ್ಪ:

ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ಅಧಿಕ ವಹಿವಾಟು ನಡೆಸುವ ಜತೆಗೆ ಹೊಗೆಸೊಪ್ಪು ಬೆಳೆ ರೈತರಿಗೆ ವರದಾನವಾಗಿದೆ. ಬರಗಾಲದ ಪರಿಣಾಮ ರೈತರು ಬೆಳೆದ ಬಹುತೇಕ ಬೆಳೆಗಳು ಒಣಗಿ ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೆ ಈಗ ಹೊಗೆಸೊಪ್ಪು ಬೆಳೆ ಮಾತ್ರ ಬೆಳೆಗಾರರ ಕೈ ಹಿಡಿದಿದೆ.

ಪ್ಲಾಟ್ ಫಾರ 63ರಲ್ಲಿ ನಡೆದ ಹರಾಜಿನಲ್ಲಿ 2.29ಲಕ್ಷ ಕೆಜಿ ಹುಡಿ ಹೊಗೆಸೊಪ್ಪು ಖರೀದಿಸಿದ್ದು 3.18 ಕೋಟಿ ವಹಿವಾಟು ನಡೆಸಲಾಗಿದೆ. ಪ್ಲಾಟ್ ಫಾರಂ 7ರಲ್ಲಿ ಈ ಬಾರಿ ನಡೆದ ಹರಾಜಿನಲ್ಲಿ 2.69 ಲಕ್ಷ ಕೆಜಿ ಹುಡಿ ಬೇಲ್ ಖರೀದಿಸಲಾಗಿದ್ದು 3.77 ಕೋಟಿ ರು. ವಹಿವಾಟು ನಡೆದಿದೆ. ಒಂದು ಕೆಜಿಗೆ ಕನಿಷ್ಠ 100 ರಿಂದ ಗರಿಷ್ಠ 170 ರು. ತನಕ ಮಾರಾಟವಾಗಿದ್ದು 139 ರು. ಸರಾಸರಿ ಬೆಲೆ ದೊರೆತಿದೆ.

ಕೋಟ್‌..

ತಂಬಾಕಿಗೆ ಉತ್ತಮ ಬೇಡಿಕೆ ಬಂದ ಕಾರಣ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಕಾಣಲು ಸಾಧ್ಯವಾಯಿತು. ಕಳೆದ ವರ್ಷ 231 ರು. ಇದ್ದ ಸರಾಸರಿ ದರ ಈ ಬಾರಿ 253 ರು.ಗೆ ಏರಿಕೆ ಕಂಡಿದ್ದು 22.47 ರು. ಹೆಚ್ಚಳವಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಬೆಳೆ ಲಾಭದಾಯಕವಾಗಿದೆ.

ಡಾ. ಬ್ರಿಜ್ ಭೂಷಣ್, ಪ್ಲಾಟ್ ಫಾರಂ 63ರ ಹರಾಜು ಅಧೀಕ್ಷಕ. (21ಎಚ್ಎಸ್ಎನ್3ಎ)ಕೋಟ್‌..

ತಂಬಾಕು ಬೆಳೆಗಾರರು ಹೆಚ್ಚು ಶ್ರಮ ವಹಿಸಿ ಹೊಗೆಸೊಪ್ಪು ಉತ್ಪಾದಿಸುತ್ತಾರೆ. ಮಾರುಕಟ್ಟೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗದಂತೆ ಜಾಗೃತಿ ವಹಿಸಿ ಉತ್ತಮ ದರ ನೀಡಲಾಗಿದೆ. ಹರಾಜು ಪ್ರಕ್ರಿಯೆ ಸುಸೂತ್ರವಾಗಿ ಮುಕ್ತಾಯವಾಗಿದ್ದು ಬೆಳೆಗಾರರಿಗೆ ಆದಾಯ ದೊರೆತಿದೆ.

ಸವಿತಾ, ಪ್ಲಾಟ್ ಫಾರಂ 7ರ ಹರಾಜು ಅಧೀಕ್ಷಕಿ (21ಎಚ್ಎಸ್ಎನ್3ಬಿ)