ರಾಜ್ಯದಲ್ಲಿ ಬೇಸಿಗೆ ಮಳೆಗೆ ಮೂವರ ಬಲಿ

| N/A | Published : May 15 2025, 01:55 AM IST / Updated: May 15 2025, 09:40 AM IST

ಸಾರಾಂಶ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ಹಲವೆಡೆ ಬುಧವಾರವೂ ಮಳೆಯಾಗಿದೆ.

 ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ರಾಜ್ಯದ ಹಲವೆಡೆ ಬುಧವಾರವೂ ಮಳೆಯಾಗಿದೆ. ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡರೆ, ರಾಜಧಾನಿ ಬೆಂಗಳೂರಿನ ಸಾಯಿ ಲೇಔಟ್‌ನಲ್ಲಿ ನಿಂತ ನೀರಿನಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ನಿಂತುಕೊಂಡಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದ್ದು, ಬಾಲಕಿ ಗಾಯಗೊಂಡಿದ್ದಾಳೆ.

 ರಾಯಚೂರು ಜಿಲ್ಲೆಯ ಹಲವೆಡೆ ಮಳೆಯಿಂದಾಗಿ ಒಣಗಲು ಹಾಕಿದ ಭತ್ತದ ಬೆಳೆ ಹಾನಿಗೊಳಗಾಗಿದೆ. ಇದೇ ವೇಳೆ, ಉಡುಪಿಯ ಸೂರಲು ಯಕ್ಷಗಾನ ಮೇಳದ ಉದಯೋನ್ಮುಖ ಯುವ ಕಲಾವಿದ ರಂಜಿತ್ ಬನ್ನಾಡಿ (22), ಆಗುಂಬೆ ಬಳಿ ಮಳೆಯಿಂದ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ.

ಕೊಡಗಿನ ವಿವಿಧೆಡೆ ಬುಧವಾರ ಸಂಜೆಯ ವೇಳೆ ಧಾರಾಕಾರ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡೆಹೊಸೂರು ಬಳಿ ಭಾರಿ ಪ್ರಮಾಣದಲ್ಲಿ ನೀರು ಹರಿದು, ವಾಹನ ಸವಾರರು ಪರದಾಡುವಂತಾಯಿತು. ಹೆದ್ದಾರಿ ಪಕ್ಕದ ಪೆಟ್ರೋಲ್‌ ಬಂಕ್‌ ಕೂಡ ಜಲಾವೃತಗೊಂಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನೀತಿಗೆರೆ ಗ್ರಾಮದಲ್ಲಿ ಮಳೆಗೆ ಎರಡು ಎಕರೆಗೂ ಹೆಚ್ಚು ಜಮೀನಿನಲ್ಲಿ ಬೆಳೆದ ಬಾಳೆ ಬೆಳೆ ನೆಲ ಕಚ್ಚಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸುತ್ತಮುತ್ತ ಭಾರೀ ಗಾಳಿ-ಮಳೆಗೆ ಮಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡು ಉಂಬಳಕೆರೆ ಸಮೀಪ ಮರ ಉರುಳಿ ಬಿದ್ದಿದ್ದು, ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ರಾಜಧಾನಿ ಬೆಂಗಳೂರಿನ ಕೆಲವೆಡೆ ಬುಧವಾರವೂ ಮಳೆಯಾಗಿದೆ. ಈ ಮಧ್ಯೆ, ನಗರದಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ 30ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಬುಧವಾರವೂ ತೆರವು ಕಾರ್ಯಾಚರಣೆ ಮುಂದುವರಿದಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ನಗರದ ಸಾಯಿ ಲೇಔಟ್ ನಲ್ಲಿ ರಾಜಕಾಲುವೆ ನೀರು ಅಂಗಡಿ, ಮನೆಗಳಿಗೆ ನುಗ್ಗಿದ್ದು, ಸುಮಾರು ಎರಡು ಅಡಿಗೂ ಹೆಚ್ಚಿನ ಪ್ರಮಾಣದ ನೀರು ನಿಂತುಕೊಂಡಿದೆ. ಹೀಗಾಗಿ, ನಿವಾಸಿಗಳ ಪರದಾಟ ಮುಂದುವರಿದಿದೆ. ಈ ಮಧ್ಯೆ, ಬುಧವಾರ ನಿಂತ ನೀರಿನಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ನಿಂತುಕೊಂಡಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದ್ದು, ಬಾಲಕಿ ಗಾಯಗೊಂಡಿದ್ದಾಳೆ.

ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ತಾಲೂಕುಗಳಲ್ಲಿ ಮಳೆಯಿಂದಾಗಿ ಜಮೀನಿನಲ್ಲಿ ಒಣಗಲು ಹಾಕಿದ ಭತ್ತ ಹಾನಿಗೊಳಗಾಗಿದೆ. ಈ ಮಧ್ಯೆ, ಗದಗ ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ಬೈಕ್‌ ಸಮೇತ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮುತ್ತಪ್ಪ ಹಡಗಲಿ (39) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಮಂಗಳವಾರ ಸುರಿದ ಮಳೆಗೆ ಚರಂಡಿ ನೀರಲ್ಲಿ ಕೊಚ್ಚಿ ಹೋಗಿದ್ದ ಗೊಲ್ಲರ ಗಲ್ಲಿಯ ನಿವಾಸಿ ಕಾಶಪ್ಪ ಶಿರಟ್ಟಿ (52) ಅವರ ಮೃತದೇಹ ಬುಧವಾರ ಸಂಜೆ ಘಟಪ್ರಭಾ ನದಿ ದಡದಲ್ಲಿ ಪತ್ತೆಯಾಗಿದೆ.

ವಿದ್ಯುತ್‌ ಶಾಕ್‌ಗೆ ಕಲಾವಿದ ಸಾವು

ಉಡುಪಿ ಜಿಲ್ಲೆಯ ಸೂರಲು ಯಕ್ಷಗಾನ ಮೇಳದ ಉದಯೋನ್ಮುಖ ಯುವ ಕಲಾವಿದ ರಂಜಿತ್ ಬನ್ನಾಡಿ (22), ಮಂಗಳವಾರ ರಾತ್ರಿ ಆಗುಂಬೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ.

ಮಂಗಳವಾರ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಸೂರಾಲು ಮೇಳದ ಯಕ್ಷಗಾನ ಪ್ರದರ್ಶನವಿತ್ತು. ಆದರೆ, ವಿಪರೀತ ಮಳೆಯಿಂದ ಪ್ರದರ್ಶನ ರದ್ದಾಗಿದ್ದು, ರಂಜಿತ್ ಅವರು ಸಹಕಲಾವಿದ ವಿನೋದ್ ರಾಜ್‌ ಜೊತೆ ಸ್ವಗ್ರಾಮ ಕೋಟ ಸಮೀಪದ ಬನ್ನಾಡಿಗೆ ಬರುತ್ತಿದ್ದರು. ದಾರಿ ಮಧ್ಯೆ, ಆಗುಂಬೆಯಲ್ಲಿ ಮಳ‍ೆಗಾಳಿಗೆ ಮರದ ಕೊಂಬೆಯೊಂದು ಮರಿದು ವಿದ್ಯುತ್ ತಂತಿ ಮೇಲೆ ಬಿದ್ದು, ತಂತಿ ಕಡಿದು ಅವರ ದ್ವಿಚಕ್ರ ವಾಹನದ ಮೇಲೆ ಬಿತ್ತು. ವಿದ್ಯುತ್ ಶಾಕ್‌ ತಗುಲಿ ಇಬ್ಬರೂ ಕಲಾವಿದರು ತೀವ್ರವಾಗಿ ಗಾಯಗೊಂಡರು.

ಕೂಡಲೇ ಸ್ಥಳೀಯರು ಅವರಿಬ್ಬರನ್ನೂ ಮಣಿಪಾಲದ ಕೆಎಂಸಿಗೆ ಸಾಗಿಸಿದರಾದರೂ, ರಂಜಿತ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಹಕಲಾವಿದ, ಸ್ತ್ರೀ ವೇಷಧಾರಿ ವಿನೋದ್‌ ರಾಜ್, ಅದೃಷ್ಟವಶಾತ್‌ ಪ್ರಾಣಪಾಯದಿಂದ ಪಾರಾಗಿದ್ದಾರೆ.