ಮಂಡ್ಯ ತಾಲೂಕಿಗೆ ಒಟ್ಟು ಮೂರು ಕೆಪಿಎಸ್ ಶಾಲೆಗಳು ಮಂಜೂರು ಆಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳು ಕಾರ್ಯಾರಂಭಗೊಳ್ಳಲಿದ್ದು, ಮಂಡ್ಯ ಶೈಕ್ಷಣಿಕ ಪ್ರಗತಿ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಓದಿನೊಂದಿಗೆ ಸಹ ಪಠ್ಯ ಚಟುವಟಿಕೆಗಳು ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಅತ್ಯವಶ್ಯಕ ಎಂದು ಶಾಸಕ ಪಿ.ರವಿಕುಮಾರ್ ಅಭಿಪ್ರಾಯಪಟ್ಟರು.

ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಮಂಡ್ಯ ದಕ್ಷಿಣ ವಲಯ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿದೆ. ಮಕ್ಕಳು ಕೇವಲ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಸಾಲದು, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಸಾಧನೆ ಮಾಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಮಂಡ್ಯ ತಾಲೂಕಿಗೆ ಒಟ್ಟು ಮೂರು ಕೆಪಿಎಸ್ ಶಾಲೆಗಳು ಮಂಜೂರು ಆಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಶಾಲೆಗಳು ಕಾರ್ಯಾರಂಭಗೊಳ್ಳಲಿದ್ದು, ಮಂಡ್ಯ ಶೈಕ್ಷಣಿಕ ಪ್ರಗತಿ ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಉಪನಿರ್ದೇಶಕ ಕೆ.ಯೋಗೇಶ್ ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಪೂರಕವಾಗಿವೆ. ಮಕ್ಕಳ ಶೈಕ್ಷಣಿಕ ಪ್ರಗತಿಯೊಂದಿಗೆ ಸಾಂಸ್ಕೃತಿಕ ಪ್ರಗತಿಯು ಮುಖ್ಯವಾಗಿದ್ದು, ಅವರಲ್ಲಿ ಅಂತರ್ಗತವಾಗಿ ಅಡಗಿರುವ ಪ್ರತಿಭೆ ಈ ಸ್ಪರ್ಧೆಗಳಿಂದ ಇನ್ನಷ್ಟು ಬೆಳಗಲಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡ್ಯ ದಕ್ಷಿಣ ವಲಯದ ಶೈಕ್ಷಣಿಕ ಸಾಧನೆಗೆ ಶಾಸಕರು ಎಲ್ಲಾ ಬಗೆಯ ಸಹಕಾರವನ್ನು ನೀಡುತ್ತಿದ್ದಾರೆ. ಎರಡು ಕೆಪಿಎಸ್ ಶಾಲೆಗಳ ಮಂಜೂರಾತಿ, ಮೂರು ಉರ್ದು ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯವು ಶಾಸಕರ ಪ್ರಯತ್ನದಿಂದ ಸಫಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ಷರ ದಾಸೋಹ ಯೋಜನೆಯ ಜಿಲ್ಲಾ ಅಧಿಕಾರಿ ರವಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಎನ್.ಉಮೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಿರೀಶ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎನ್. ನಂದೀಶ್, ಕಾರ್ಯದರ್ಶಿ ಆರ್.ಎ.ಚಂದ್ರಶೇಖರ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ರಮೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಗಲ ಶಿವಣ್ಣ, ಕಾರ್ಯದರ್ಶಿ ಶಿವಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಲಿಂಗರಾಜು, ತಾಲೂಕು ಅಧ್ಯಕ್ಷ ನಾಗರಾಜು, ಸರ್ಕಾರಿ ನೌಕರರ ನಿರ್ದೇಶಕರಾದ ಆಶಾರಾಣಿ, ವೈ.ಸಿ. ಉಮೇಶ್, ಡಿ.ಕೆ.ನಾಗರಾಜು, ಮುಖ್ಯ ಶಿಕ್ಷಕಿ ಡಾ.ಶಬನಾ ಸೇರಿದಂತೆ ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.