ಉದ್ಯಾನ ನಗರಿಗೆ ಮನೆ ಕಳ್ಳತನ ಮಾಡಲು ಉತ್ತರ ಭಾರತದಿಂದ ಬರುತ್ತಿದ್ದ ಮೂವರು ಕಿಡಿಗೇಡಿಗಳನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ನಾಗೇಂದ್ರ ಸಹಾನಿ, ರಾಜಸ್ಥಾನದ ಕೈಲಾಸ್‌ ಹಾಗೂ ಗೋಪಾಲ್ ಬಂಧಿತರಾಗಿದ್ದು, ಆರೋಪಿಗಳಿಂದ 196 ಗ್ರಾಂ ಚಿನ್ನಾಭರಣ, 1.756 ಕೆಜಿ ಬೆಳ್ಳಿ ಹಾಗೂ 22 ಸಾವಿರ ನಗದು ಸೇರಿದಂತೆ ಒಟ್ಟು 40 ಲಕ್ಷ ರು.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉದ್ಯಾನ ನಗರಿಗೆ ಮನೆ ಕಳ್ಳತನ ಮಾಡಲು ಉತ್ತರ ಭಾರತದಿಂದ ಬರುತ್ತಿದ್ದ ಮೂವರು ಕಿಡಿಗೇಡಿಗಳನ್ನು ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ನಾಗೇಂದ್ರ ಸಹಾನಿ, ರಾಜಸ್ಥಾನದ ಕೈಲಾಸ್‌ ಹಾಗೂ ಗೋಪಾಲ್ ಬಂಧಿತರಾಗಿದ್ದು, ಆರೋಪಿಗಳಿಂದ 196 ಗ್ರಾಂ ಚಿನ್ನಾಭರಣ, 1.756 ಕೆಜಿ ಬೆಳ್ಳಿ ಹಾಗೂ 22 ಸಾವಿರ ನಗದು ಸೇರಿದಂತೆ ಒಟ್ಟು 40 ಲಕ್ಷ ರು.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಕೃತ್ಯದಲ್ಲಿ ತಪ್ಪಿಸಿಕೊಂಡಿರುವ ಉತ್ತಮ್ ಸಿಂಗ್ ಪತ್ತೆಗೆ ತನಿಖೆ ಮುಂದುವರಿದಿದೆ. ಇತ್ತೀಚಿಗೆ ಆನಂದಪುರದ ಬಟ್ಟೆ ವ್ಯಾಪಾರಿ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕೃತ್ಯದ ಖದೀಮ ಸೆರೆಗೆ ಕಾರ್ಯಾಚರಣೆಗಿಳಿದ ಇನ್ಸ್‌ಪೆಕ್ಟರ್‌ ಬಿ.ರಾಮಮೂರ್ತಿ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಸೇರಿ ಇತರೆ ಬಾತ್ಮಿ ಮೇರೆಗೆ ಉತ್ತರ ಭಾರತದಲ್ಲಿ ಆರೋಪಿಗಳನ್ನು ಸೆರೆ ಹಿಡಿದಿದೆ.

ಉತ್ತಮ್ ಸಿಂಗ್ ಕ್ಯಾಪ್ಟನ್‌:

ರಾಜಸ್ಥಾನ ಮೂಲದ ಉತ್ತಮ್ ಸಿಂಗ್ ಕುಖ್ಯಾತ ಕ್ರಿಮಿನಲ್ ಆಗಿದ್ದು, ಬೆಂಗಳೂರಿನಲ್ಲಿರುವ ತನ್ನೂರಿನ ಜನರಿಂದ ಇಲ್ಲಿನ ವ್ಯಾಪಾರಿಗಳು ಸೇರಿದಂತೆ ಶ್ರೀಮಂತರ ಬಗ್ಗೆ ಆತ ಮಾಹಿತಿ ಕಲೆ ಹಾಕುತ್ತಿದ್ದ. ಬಳಿಕ ತನ್ನ ಸಹಚರರ ಮೂಲಕ ಆ ಸಿರಿವಂತರ ಮನೆಗಳಿಗೆ ಉತ್ತಮ್ ಸಿಂಗ್ ಕನ್ನ ಹಾಕಿಸಿ ನಗ-ನಾಣ್ಯ ದೋಚುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಸಹಚರರಿಗೆ ಶೇ.40ರಷ್ಟು ಹಂಚಿ ಉತ್ತಮ್ ಮಜಾ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಅದೇ ರೀತಿ ಕೆಲ ದಿನಗಳ ಹಿಂದೆ ಬಟ್ಟೆ ವ್ಯಾಪಾರಿ ಚೌಧರಿ ಮನೆಗೆ ಕನ್ನ ಹಾಕಿದ್ದರು. ಮನೆಗಳ್ಳತನ ಸಲುವಾಗಿ ಕೃತ್ಯ ಎಸಗುವ 3 ದಿನಗಳ ಮುಂಚೆ ಗೋಪಾಲ್, ನಾಗೇಂದ್ರ ಹಾಗೂ ಕೈಲಾಸ್ ಬಂದಿದ್ದರು. ಮೊದಲು ಚೌಧರಿ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದ್ದ ಆರೋಪಿಗಳು, ಆತನ ಚಲನವನದ ಬಗ್ಗೆ ಮಾಹಿತಿ ಕಲೆ ಹಾಕಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ಸಂಬಂಧಿಕರ ಮದುವೆ ಸಲುವಾಗಿ ಪುಣೆಗೆ ಚೌಧರಿ ತೆರಳಿದ್ದರು. ಆಗ ಅಂಗಡಿ ನೋಡಿಕೊಳ್ಳಲು ಮನೆಗೆ ಬೀಗ ಹಾಕಿ ಆತನ ಪತ್ನಿ ಹಾಗೂ ಮಕ್ಕಳು ತೆರಳಿದ್ದಾಗ ಅವರ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಮೂವರಲ್ಲಿ ಓರ್ವ ಹಳೇ ಕಳ್ಳ

ಈ ಬಂಧಿತರ ಪೈಕಿ ನಾಗೇಂದ್ರ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಈ ಹಿಂದೆ ಚಿಕ್ಕಪೇಟೆಯಲ್ಲಿ ಆತ ಕಳ್ಳತನ ಮಾಡಿ ಜೈಲು ಸೇರಿದ್ದ. ನಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದು ನಗರ ತೊರೆದು ಮುಂಬೈನಲ್ಲಿ ಆತ ತರಕಾರಿ ಮಾರುತ್ತಿದ್ದ. ರಾಜಸ್ಥಾನದ ತನ್ನೂರಿನಲ್ಲಿ ಬಟ್ಟೆ ವ್ಯಾಪಾರವನ್ನು ಕೈಲಾಶ್ ಹಾಗೂ ಗೋಪಾಲ್ ನಡೆಸುತ್ತಿದ್ದರು. ಹಣದಾಸೆಗೆ ಉತ್ತಮ್ ಜತೆ ಕೈ ಜೋಡಿಸಿ ಈಗ ಮೂವರು ಜೈಲು ಸೇರುವಂತಾಗಿದೆ.