ಸಾರಾಂಶ
ಕನ್ನಡಪ್ರಭಾ ವಾರ್ತೆ ಉಳ್ಳಾಲ
ಇಲ್ಲಿನ ಸೋಮೇಶ್ವರ ಉಚ್ಚಿಲದ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಮೈಸೂರಿನ ಮೂವರು ಯುವತಿಯರು ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.ಮೈಸೂರು ವಿಜಯನಗರ ದೇವರಾಜ್ ಮೊಹಲ್ಲಾ ನಿವಾಸಿ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್. (21), ಕುರುಬರಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ .(21) ಹಾಗೂ ಕೆ.ಆರ್. ಮೊಹಲ್ಲಾದ ರಾಮಾನುಜ ರಸ್ತೆಯ 11ನೇ ಕ್ರಾಸ್ ನಿವಾಸಿ ಎಂ.ಎನ್. ಶ್ರೀನಿವಾಸ್ ಎಂಬವರ ಪುತ್ರಿ ಪಾರ್ವತಿ ಎಸ್. (20) ಮೃತರು.
ಶನಿವಾರ ರೆಸಾರ್ಟ್‌ಗೆ ಮೂವರು ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಭಾನುವಾರ ಬೆಳಗ್ಗೆ ಚಹಾ ಮುಗಿಸಿ 10.05ಕ್ಕೆ ರೆಸಾರ್ಟ್ ಮುಂಭಾಗದಲ್ಲಿರುವ ಈಜುಕೊಳದಲ್ಲಿ ಆಟವಾಡುವ ಸಂದರ್ಭ ಈ ಘಟನೆ ನಡೆದಿದೆ. ಸಿ.ಸಿ. ಟಿವಿಯಲ್ಲಿ ದಾಖಲಾಗಿರುವ ದೃಶ್ಯದಂತೆ ಅರ್ಧ ಗಂಟೆ ಕಾಲ ಇವರು ಈಜುಕೊಳದಲ್ಲಿ ಈಜಾಡುತ್ತಿದ್ದರು. ಬಳಿಕ ಅಲ್ಲೇ ಈಜುಗಾರರ ಸುರಕ್ಷತೆಗೆ ಇಡಲಾಗಿದ್ದ ಟಯರ್ ಟ್ಯೂಬ್‌ನ್ನು ಹಿಡಿಯಲು ಓರ್ವ ವಿದ್ಯಾರ್ಥಿನಿ ಮುಂದೆ ಹೋಗಿದ್ದಾಳೆ. ಈ ವೇಳೆ ಆಯತಪ್ಪಿದ ಆಕೆಯನ್ನು ರಕ್ಷಿಸಲು ಹೋದ ಇನ್ನೊಬ್ಬಳೂ ಮುಳುಗಿದ್ದಾಳೆ. ಉಳಿದ ಇನ್ನೊಬ್ಬಳೂ ಇವರನ್ನು ರಕ್ಷಿಸಲು ಹೋಗಿ ತಾನೂ ನೀರಲ್ಲಿ ಮುಳುಗಿದ್ದು, ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರೆಸಾರ್ಟ್ ಸಿಬ್ಬಂದಿ ಉಪಾಹಾರ ತಯಾರಿಗೆಂದು ಅಡುಗೆ ಕೋಣೆಯಲ್ಲಿದ್ದ ಸಂದರ್ಭ ಘಟನೆ ಸಂಭವಿಸಿದೆ. ಮುಳುಗೇಳುತ್ತಿದ್ದ ವಿದ್ಯಾರ್ಥಿಗಳಿಗೆ ಬೊಬ್ಬೆ ಹಾಕಲು ಸಾಧ್ಯವಾಗಿಲ್ಲ. ಇದರಿಂದಾಗಿ ರೆಸಾರ್ಟ್ ಒಳಗಿದ್ದ ಸಿಬ್ಬಂದಿಗೂ ಘಟನೆ ಅರಿವಿಗೆ ಬಂದಿಲ್ಲ. ವಿದ್ಯಾರ್ಥಿನಿಯರು ತಾವು ಈಜುಕೊಳಕ್ಕೆ ಇಳಿಯುವ ಮೊದಲು ಈಜುಕೊಳದ ಹ್ಯಾಂಡ್ ರೈಲಿಂಗ್‌ನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಆನ್ ಮಾಡಿಟ್ಟು ಹೋಗಿದ್ದರು. ಇಡೀ ಘಟನೆಯ ದೃಶ್ಯಗಳು ರೆಸಾರ್ಟ್‌ನ ಸಿಸಿಟಿವಿಯಲ್ಲಿ ದಾಖಲಾಗಿದೆ. ರೆಸಾರ್ಟ್ ನಿಯಮದ ಪ್ರಕಾರ ಬೆಳಗ್ಗೆ 11 ಗಂಟೆಗೆ ವಿದ್ಯಾರ್ಥಿನಿಯರು ಚೆಕ್ ಔಟ್ ಮಾಡಬೇಕಿತ್ತು. ಅದಕ್ಕೂ ಮುನ್ನ ಈಜಲು ತೆರಳಿದ್ದು, ಆ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಯುವತಿಯರ ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಅವರು ಬಂದ ಬಳಿಕ ಹಸ್ತಾಂತರಿಸಲಾಗುತ್ತದೆ.ರೆಸಾರ್ಟ್‌ಗೆ ಬೀಗ, ಪರವಾನಗಿ ರದ್ದು:ಸ್ಥಳಕ್ಕೆ ಆಗಮಿಸಿದ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್ ಪರಿಶೀಲನೆ ನಡೆಸಿ ರೆಸಾರ್ಟ್ ಪರವಾನಗಿ ರದ್ದುಗೊಳಿಸುವ ಆದೇಶ ನೀಡಿದ್ದಾರೆ. ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಗೆ ರದ್ದುಗೊಳಿಸಲು ಸೂಚಿಸಿದ್ದಾರೆ. ಜತೆಗೆ ರೆಸಾರ್ಟ್ ಸೀಲ್ ಡೌನ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸದ್ಯ ರೆಸಾರ್ಟ್ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಗಿ ಅಮಾನತಿನಲ್ಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಮಂಗಳೂರು ಕಮಿಷನರ್ ಅನುಪಮ್ ಅಗರ್‌ವಾಲ್, ಮಂಗಳೂರು ಎಸಿ ಹರ್ಷವರ್ಧನ್, ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಉಳ್ಳಾಲ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಚ್.ಎನ್. ಬಾಲಕೃಷ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.................
ಮೇಲ್ನೋಟಕ್ಕೆ ನಿಯಮ ಉಲ್ಲಂಘಿಸಲಾಗಿರುವ ಆರೋಪದಡಿ ರೆಸಾರ್ಟ್ ಮಾಲಕ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರಿಗೂ ಈಜು ಬರುತ್ತಿರಲಿಲ್ಲ. ಒಬ್ಬಳನ್ನು ರಕ್ಷಿಸಲು ಹೋಗಿ ಇತರ ಇಬ್ಬರು ಕೂಡ ಮುಳುಗಿದ್ದಾರೆ. ಸಾಮಾನ್ಯವಾಗಿ ರೆಸಾರ್ಟ್ ಅಥವಾ ಇತರ ಕಡೆ ಈಜುಕೊಳದಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಅಲ್ಲಿನವರು ಸಾಮಾನ್ಯ ಷರತ್ತುಗಳನ್ನು ಪೂರೈಸಬೇಕಿರುತ್ತದೆ. ಅದರಂತೆ ಲೈಫ್‌ಗಾರ್ಡ್ ಇರಬೇಕು. ಈಜುಕೊಳದ ಆಳವನ್ನು ಸ್ಪಷ್ಟವಾಗಿ ತಿಳಿಸಿರಬೇಕು. ಆದರೆ ಈ ರೆಸಾರ್ಟ್‌ನಲ್ಲಿ ಲೈಫ್ ಗಾರ್ಡ್ ಇರಲಿಲ್ಲ. ಆಳದ ಬಗ್ಗೆಯೂ ಅಲ್ಲಿ ಸೂಚಿಸಿರಲಿಲ್ಲ. ಸಿಸಿ ಕೆಮರಾ ದೃಶ್ಯ ನೋಡುವಾಗ ಅವರು ರಕ್ಷಣೆಗೆ ಕೂಗಾಡುತ್ತಿರುವುದು, ಸಹಾಯಕ್ಕೆ ಯಾರು ಕೂಡ ಇಲ್ಲದಿರುವುದು ಕೂಡ ಗೊತ್ತಾಗುತ್ತಿದೆ.- ಅನುಪಮ್ ಅಗರ್‌ವಾಲ್, ಪೊಲೀಸ್ ಆಯುಕ್ತ, ಮಂಗಳೂರು.