ರಸ್ತೆಗಳಲ್ಲೆ ಒಕ್ಕಣೆ: ವಾಹನ ಸವಾರರಿಗೆ ಕಿರಿಕಿರಿ

| Published : Feb 08 2024, 01:36 AM IST / Updated: Feb 08 2024, 01:37 AM IST

ರಸ್ತೆಗಳಲ್ಲೆ ಒಕ್ಕಣೆ: ವಾಹನ ಸವಾರರಿಗೆ ಕಿರಿಕಿರಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಗ್ರಾಮೀಣ ಪ್ರದೇಶದ ಬಹು ಭಾಗಗಳ ರಸ್ತೆಗಳು ಇದೀಗ ಒಕ್ಕಣೆಯ ಕಣಗಳಾಗಿ ಮಾರ್ಪಟ್ಟು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಗ್ರಾಮೀಣ ಪ್ರದೇಶದ ಬಹು ಭಾಗಗಳ ರಸ್ತೆಗಳು ಇದೀಗ ಒಕ್ಕಣೆಯ ಕಣಗಳಾಗಿ ಮಾರ್ಪಟ್ಟು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

ಗ್ರಾಮಾಂತರ ಪ್ರದೇಶದ ಮುಖ್ಯರಸ್ತೆಗಳಲ್ಲಿಯೇ ರಾಗಿಮೆದೆ, ಹುರುಳಿ ಕಾಳಿನ ಮೆದೆ ಸೇರಿದಂತೆ ವಿವಿಧ ಧಾನ್ಯ ಹರಡಿ ಸಾರ್ವಜನಿಕರಿಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಲಾಗುತ್ತಿದೆ.

ತಾಲೂಕಿನ ಮಾವತ್ತೂರು, ಕೋಳಾಲ ಗ್ರಾಮಗಳಿಗೆ ಹೋಗುವ ರಸ್ತೆಯಲ್ಲಿಯೇ ಒಕ್ಕಣೆ ಮಾಡಲು ರಾಗಿಮೆದೆ ಹಾಗೂ ಹುರುಳಿಕಾಳು ಮೆದೆ ಹರಡಿದ್ದು ತಾಲೂಕಿನ ವಿವಿಧ ಕಡೆಗಳಲ್ಲಿ ಹಾದು ಹೋಗಿರುವ ಮುಖ್ಯ ರಸ್ತೆಗಳಲ್ಲಿಯೇ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿರುವ ಕಾರಣ ಈ ರಸ್ತೆಗಳು ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿ ವಾಹನ ಸವಾರರು ಪರಿತಪಿಸಿ ಮುಂದೆ ಸಾಗಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರು ಬೆಳೆಗಳನ್ನು ಕಟಾವು ಮಾಡಿ ಅವುಗಳನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ಶೇಖರಿಸಲು ಗ್ರಾಮಗಳ ಮೂಲಕ ಹಾದು ಹೋಗಿರುವ ಹಾಗೂ ಸ್ಥಳೀಯವಾಗಿರುವ ಡಾಂಬರು ಹಾಗೂ ಸಿ.ಸಿ ರಸ್ತೆಗಳನ್ನು ಒಕ್ಕಣೆ ಕಣಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ರಾಗಿ, ಹುರುಳಿ, ಅವರೆ, ಅಲಸಂದೆ, ತೊಗರಿ ಬೆಳೆಗಳನ್ನು ಸ್ವಚ್ಛಗೊಳಿಸಲು ಕಣದ ಅವಶ್ಯಕತೆಯಿದ್ದು ಸ್ಥಳೀಯವಾಗಿ ಒಕ್ಕಣೆ ಮಾಡುವ ಸೌಲಭ್ಯ ಇಲ್ಲದ ಕಾರಣ ರಸ್ತೆಗಳೇ ಒಕ್ಕಣೆಗಳಾಗಿ ಮಾರ್ಪಟ್ಟಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾ.ಪಂನಿಂದ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಕಣಗಳು ಕಣ್ಮರೆಯಾಗಿದ್ದು, ಕಣಗಳು ಇಲ್ಲದೆ ಒಕ್ಕಣೆ ಮಾಡಿಕೊಳ್ಳುವುದು ರೈತರಿಗೆ ತೊಂದರೆಯಾಗಿದೆ.

ರಸ್ತೆಯ ಬದಿಗಳಲ್ಲಿ ರೈತರು ಧಾನ್ಯಗಳನ್ನು ಒಣಗಿಸಲು ಬಳಕೆ ಮಾಡುತ್ತಿದ್ದಾರೆ. ವೇಗವಾಗಿ ಬರುವ ವಾಹನಗಳು ಹಾಗೂ ರಾತ್ರಿಯ ವೇಳೆ ಸಂಚರಿಸುವ ವಾಹನಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಧಾನ್ಯದ ಜೊತೆಗೆ ಮೇವು ಸಹ ಪುಡಿ ಪುಡಿಯಾಗಿ ವ್ಯರ್ಥವಾಗುತ್ತದೆ. ರಸ್ತೆಗಳಲ್ಲಿಯೇ ಹರಡಿರುವ ಹುಲ್ಲಿನ ಮೇಲೆ ಮುಂದೆ ಸಾಗುವಾಗ ದ್ವಿಚಕ್ರ ವಾಹನ ಸಾವಾರರು ಜಾರಿ ನೆಲಕ್ಕೆ ಬೀಳುವ ಸಾಧ್ಯತೆಗಳು ಸಹ ಇದೆ.

ರೈತರು ಜಮೀನಿನಲ್ಲಿ ಬೆಳೆದ ಬೆಳೆ ಸ್ವಚ್ಛಗೊಳಿಸಲು ಸ್ಥಳೀಯವಾಗಿ ಲಭ್ಯವಿರುವ ರಸ್ತೆಗಳನ್ನೇ ಬಳಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ನಾಗರೀಕರ ಮತ್ತು ವಾಹನ ಸವಾರರ ಸಂರಕ್ಷತೆಗೆ ಬೇಕಾದ ಮುನ್ನೇಚ್ಚರಿಕಾ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಒಕ್ಕಣೆ ಕಣಗಳು ಮಾಡುವ ಸಂದರ್ಭದಲ್ಲಿ ರೈತರಿಗೆ ಅಧಿಕಾರಿಗಳು ಕ್ರಮವಾದ ಸೂಚನೆಗಳನ್ನು ನೀಡಿದ್ದಲ್ಲಿ ರಸ್ತೆಗಳಲ್ಲಿ ಸಾಗಿ ಹೋಗುವ ವಾಹನ ಸವಾರರಿಗೆ ಸಂಕಷ್ಟ ಎದುರಾಗುವುದಿಲ್ಲ.

ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿವಹಿಸಿ ರೈತರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಿ. ರಸ್ತೆಗಳಲ್ಲಿ ಒಕ್ಕಣೆ ಕಣಗಳು ಮಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು. ಇನ್ನು ಮುಂದಾದರೂ ಅಧಿಕಾರಿಗಳು ರಸ್ತೆಗಳನ್ನೇ ಕಣಗಳನ್ನಾಗಿ ಮಾರ್ಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ಸಂದರ್ಭದಲ್ಲಿ ಆಗಬಹುದಾದ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂದಾಗುವರೇ? ಕಾದು ನೋಡಬೇಕಿದೆ.