ಮಳೆಯ ಆರ್ಭಟ: ಸಿಡಿಲು ಬಡಿದು ಜೋಡಿ ಕೋಣಗಳು ಸಾವು

| Published : May 20 2025, 11:55 PM IST

ಸಾರಾಂಶ

ಗ್ರಾಮದ ರೈತ ಮಹದೇವು ಅವರಿಗೆ ಸೇರಿದ ಕೋಣಗಲನ್ನು ಮನೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಸೋಮವಾರ ರಾತ್ರಿ ಗುಡುಗು ಸಿಡಿಲಿನ ಅರ್ಭಟದ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಜೋಡಿ ಕೋಣಗಳು ಸ್ಥಳದಲ್ಲಿಯೇ ಪ್ರಾಣಬಿಟ್ಟಿವೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸಿಡಿಲು ಬಡಿದು ಜೋಡಿ ಕೋಣಗಳು ಸಾವನ್ನಪ್ಪಿರುವ ಘಟನೆ ಬೋಳಮಾರನಹಳ್ಳಿ ಸಮೀಪದ ಕೊಪ್ಪಲುಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ರೈತ ಮಹದೇವು ಅವರಿಗೆ ಸೇರಿದ ಕೋಣಗಲನ್ನು ಮನೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಸೋಮವಾರ ರಾತ್ರಿ ಗುಡುಗು ಸಿಡಿಲಿನ ಅರ್ಭಟದ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಜೋಡಿ ಕೋಣಗಳು ಸ್ಥಳದಲ್ಲಿಯೇ ಪ್ರಾಣಬಿಟ್ಟಿವೆ.

ಈ ಕೋಣಗಳನ್ನು ಬೂಕನಬೆಟ್ಟ ಜಾತ್ರೆಗೆ ತೆಗೆದುಕೊಂಡು ಹೋಗಿದ್ದಾಗ 2.5 ಲಕ್ಷ ರು.ಗಳಿಗೆ ವ್ಯಾಪಾರಿಗಳು ಕೇಳಿದ್ದರು ಎನ್ನಲಾಗಿದೆ. ಕೋಣಗಳನ್ನು ನೋಡಿದ ಹಲವರು ತಮಗೆ ಖರೀದಿಗೆ ಕೊಡಿ ಎಂದು ಪೀಡಿಸುತ್ತಿದ್ದರು. ಆದರೆ, ರೈತ ಮಹದೇವು ಖುಷಿಗಾಗಿ ಪ್ರೀತಿಯಿಂದ ತಮ್ಮ ಕುಟುಂಬ ಸದಸ್ಯರಂತೆ ಸಾಕಿಕೊಂಡಿದ್ದರು.

ಮನೆಯಲ್ಲಿದ್ದ ಕುಟುಂಬದವರು ಸಿಡಿಲಿನಿಂದ ಪಾರಾಗಿದ್ದಾರೆ. ಮೃತ ಕೋಣಗಳನ್ನು ಪಶು ಆಸ್ಪತ್ರೆಯವರು ಪಂಚಾನಾಮೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದರು. ಘಟನಾ ಸ್ಥಳಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿಕೆ.ಆರ್.ಶ್ರೀನಿವಾಸ್ ಆಗಮಿಸಿ ಸೂಕ್ತ ಪರಿಹಾರ ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದರು.

ವಿದ್ಯುತ್ ಸ್ಪರ್ಶ 6 ಕುರಿಗಳು ಸಾವು

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯುತ್ ಸ್ಪರ್ಶದಿಂದ 6 ಕುರಿಗಳು ಮೃತಪಟ್ಟು ಮೂವರು ಕುರಿಗಾಯಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕಾಲೋನಿ ಸಮೀಪ ಸೋಮವಾರ ಸಂಜೆ ಜರುಗಿದೆ.

ನಾಗಮಂಗಲ ತಾಲೂಕು ಟಿ.ಚನ್ನಾಪುರ ಗ್ರಾಮದ (ಪಣಿಗೌಡನಕೊಪ್ಪಲು) ಕರಿಗಿರೀಗೌಡರ 6 ಕುರಿಗಳು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೆ ಕೊನೆಯುಸಿರೆಳೆದಿವೆ. ಘಟನೆ ಸಂಭವಿಸಿದ ಸ್ಥಳದಲ್ಲಿ ಕರಿಗಿರೀಗೌಡ ಸೇರಿದಂತೆ ಮೂವರು ಇದ್ದರು. ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗೆಜ್ಜಲಗೆರೆ ಕಾಲೋನಿ ಸಮೀಪದ ಕಿಟ್ಟಿ ಡಾಬಾ ಬಳಿ ಸೋಮವಾರ ಸಂಜೆ ಮಳೆ ಬಿದ್ದ ಕಾರಣ ಕೃಷಿ ಪಂಪ್ ಸೆಟ್ ಗೆ ಹಾಕಲಾಗಿದ್ದ ಟ್ರಾನ್ಸ್ ಫಾರ್ಮರ್ ನ್ಯೂಟ್ರಿಕ್ ಜಂಪ್ ನಿರಂತರ ಜ್ಯೋತಿ ವೈರ್ ಮೇಲೆ ಬಿದ್ದು ತಗಲು ಹಾಕಿಕೊಂಡಿದೆ. ಈ ವೇಳೆ ವಿದ್ಯುತ್ ನೆಲಕ್ಕೆ ತಾಗಿ ವಿದ್ಯುತ್ ಕುರಿಗಳಿಗೆ ಸ್ಪರ್ಶವಾಗಿ ಇದರಲ್ಲಿ 6 ಕುರಿಗಳು ಸ್ಥಳದಲ್ಲೆ ಸಾವನ್ನಪ್ಪಿವೆ. ಇದನ್ನು ಕಂಡ ಕರಿಗಿರೀಗೌಡ ಸೇರಿದಂತೆ ಮೂವರು ಕುರಿಗಾಯಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.