ಭಾನುವಾರ ನಸುಕಿನಲ್ಲಿ ಗುಡುಗು, ಸಿಡಿಲು ಜಿಲ್ಲೆಯ ಜನತೆಯ ನಿದ್ರೆಯನ್ನು ಕಸಿದುಕೊಂಡರೆ, ಅದಾದ ಕೆಲವೆ ಗಂಟೆಗಳಲ್ಲಿ ಭಟ್ಕಳದಲ್ಲಿ ಚಿಪ್ಪಿಕಲ್ಲು ತೆಗೆಯಲು ಹೋದ ಒಂದೇ ಕುಟುಂಬದ 10 ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅಸುನೀಗಿದ ಬರ ಸಿಡಿಲು ಎರಗಿತು.

ವಸಂತಕುಮಾರ್ ಕತಗಾಲ

 ಕಾರವಾರಭಾನುವಾರ ನಸುಕಿನಲ್ಲಿ ಗುಡುಗು, ಸಿಡಿಲು ಜಿಲ್ಲೆಯ ಜನತೆಯ ನಿದ್ರೆಯನ್ನು ಕಸಿದುಕೊಂಡರೆ, ಅದಾದ ಕೆಲವೆ ಗಂಟೆಗಳಲ್ಲಿ ಭಟ್ಕಳದಲ್ಲಿ ಚಿಪ್ಪಿಕಲ್ಲು ತೆಗೆಯಲು ಹೋದ ಒಂದೇ ಕುಟುಂಬದ 10 ಜನರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅಸುನೀಗಿದ ಬರ ಸಿಡಿಲು ಎರಗಿತು. ಇಡಿ ಜಿಲ್ಲೆ ತಲ್ಲಣಗೊಂಡಿತು. ಜಿಲ್ಲೆಯಲ್ಲಿ ಇಂತಹ ಘೋರ ದುರಂತಗಳು ಆಗಾಗ ನಡೆದು ಜನತೆಯ ಬದುಕು ಮೂರಾಬಟ್ಟೆಯಾಗುತ್ತಿದೆ.

ಅಮಾಯಕರ ಜೀವ ಕಸಿದುಕೊಂಡ ಹೃದಯ ವಿದ್ರಾವಕ ಘಟನೆ

ಭಟ್ಕಳದಲ್ಲಿ ಬದುಕಿನ ಬುತ್ತಿಗಾಗಿ ನೀರಿಗಿಳಿದ ಅಮಾಯಕರ ಜೀವ ಕಸಿದುಕೊಂಡ ಹೃದಯ ವಿದ್ರಾವಕ ಘಟನೆಯಿಂದ ಜನತೆ ದಿಗ್ಭ್ರಮೆಗೊಂಡರು. 10 ಜನರು ಬಲಿಯಾದರೆ, ಮೂವರು ಗಂಭೀರ ಗಾಯಗೊಂಡು ಚಿಕಿತ್ಸೆಗೆ ದಾಖಲಾದರು. ಒಬ್ಬ ಕಣ್ಮರೆಯಾಗಿ ದುರಂತದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ.ಕರಾವಳಿಯ ಅದೆಷ್ಟೋ ಕುಟುಂಬಗಳ ಜೀವನ ನಿರ್ವಹಣೆಗೆ ಚಿಪ್ಪಿಕಲ್ಲು ಆಧಾರವಾಗಿದೆ. ಈಗ ಅದೇ ಚಿಪ್ಪಿಕಲ್ಲು ಇಷ್ಟೊಂದು ಜನರನ್ನು ಆಹುತಿ ಪಡೆಯುವಂತಾದದ್ದು ವಿಪರ್ಯಾಸವಾಗಿದೆ.

ಉತ್ತರ ಕನ್ನಡದಲ್ಲಿ ಇಂತಹ ದುರಂತ ಪುನರಾವರ್ತನೆಯಾಗುತ್ತಲೆ ಇದೆ. 2009ರಲ್ಲಿ ಕಾರವಾರ ತಾಲೂಕಿನ ಕಡವಾಡದಲ್ಲಿ ಗುಡ್ಡ ಕುಸಿತದಲ್ಲಿ 19 ಜನರು ಬಲಿಯಾದರು. 2024ರಲ್ಲಿ ಅಂಕೋಲಾದ ಶಿರೂರು ಎಂಬಲ್ಲಿ ಕುಸಿದ ಗುಡ್ಡ 11 ಜನರನ್ನು ಆಹುತಿ ತೆಗೆದುಕೊಂಡಿತು. ಅವರಲ್ಲಿ ಇಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.ಭಟ್ಕಳದ ಮುಠ್ಠಳ್ಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಗುಡ್ಡದ ಅಡಿಯಲ್ಲಿ ಅಸುನೀಗಿದರು. 2017 ತಂಡ್ರಕುಳಿಯಲ್ಲಿ ಕುಸಿದ ಗುಡ್ಡ ಮೂವರನ್ನು ಆಪೋಶನ ತೆಗೆದುಕೊಂಡಿತು. 2025ರಲ್ಲಿ ಯಲ್ಲಾಪುರ ಬಳಿ ತರಕಾರಿ ಲಾರಿ ಉರುಳಿ 10 ಜನರು ಸಾವಿಗೀಡಾದರು.

ಗುಡ್ಡ ಹಾಗೂ ನೀರು ಉತ್ತರ ಕನ್ನಡದ ಜನತೆಯ ಪ್ರಾಣ ಹಿಂಡುತ್ತಿವೆ. ದೊಡ್ಡ ದುರಂತಗಳನ್ನು ಹೊರತುಪಡಿಸಿಯೂ ಅಲ್ಲೊಬ್ಬರು ಇಲ್ಲೊಬ್ಬರು ಗುಡ್ಡ ಕುಸಿತಕ್ಕೆ ಬಲಿಯಾಗಿದ್ದಾರೆ. ಕಡಲತೀರದಲ್ಲಿ ಉಸಿರು ಚೆಲ್ಲಿದ ಪ್ರವಾಸಿಗರು, ಮೀನುಗಾರಿಕೆ ನಡೆಸುವಾಗ ಜೀವ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಲೇ ಇವೆ.

ಮಾಂಸಕ್ಕಾಗಿ ಚಿಪ್ಪಿಕಲ್ಲು

ಚಿಪ್ಪಿಕಲ್ಲು ಎಂದರೆ ಕಪ್ಪೆಚಿಪ್ಪು ಅಥವಾ ಜಲಚರ ಜೀವಿ. ಇದಕ್ಕೆ ಮುರುವಾಯಿ, ಕಲವಾ, ತಿಸ್ರೆ, ಕುಬೆ ಮತ್ತಿತರ ಹೆಸರುಗಳಿಂದ ಕರೆಯುತ್ತಾರೆ. ನದಿ ಹಾಗೂ ಸಮುದ್ರದ ಸಂಗಮ ಪ್ರದೇಶದಲ್ಲಿ ಕಲ್ಲುಬಂಡೆಗಳ ಮೇಲೆ ಅಂಟಿಕೊಂಡು ಬೆಳೆಯುತ್ತದೆ. ಚಿಪ್ಪಿಗಳ ಒಳಗಡೆ ಇರುವ ಜೀವಿ (ಮಾಂಸ)ಯನ್ನು ಸುಕ್ಕಾ, ಗಸಿ ಹಾಗೂ ಫ್ರೈಗಳನ್ನು ಮಾಡುತ್ತಾರೆ. ಇದನ್ನು ಆಯ್ದು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುವ ಸಾವಿರಾರು ಕುಟುಂಬಗಳು ಕರಾವಳಿಯಲ್ಲಿವೆ.