ಮೂಲ್ಕಿ ತಾಲೂಕಿನಲ್ಲಿ ಗುಡುಗು ಸಹಿತ ಮಳೆ; ಕೆಲವೆಡೆ ಹಾನಿ

| Published : Apr 21 2024, 02:22 AM IST

ಸಾರಾಂಶ

ಕೆಂಚನಕೆರೆಯಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಯ ಮೋರಿಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಿದ್ದರಿಂದ ಮಳೆ ನೀರು ಹರಿಯಲು ತಡೆ ಉಂಟಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಕಿನ್ನಿಗೋಳಿ, ಕಟೀಲು, ಹಳೆಯಂಗಡಿ ಸೇರಿದಂತೆ ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಕೆಲ ಕಡೆ ಕೃತಕ ನೆರೆ ಹಾಗೂ ಸಿಡಿಲಿನಿಂದ ಹಾನಿ ಸಂಭವಿಸಿದೆ.

ಮೂಲ್ಕಿ ಬಪ್ಪನಾಡು ದೇವಸ್ಥಾನದ ಒಳಗಡೆ ಭಾರೀ ಮಳೆಗೆ ಮಳೆ ನೀರು ನಿಂತು ಕೃತಕ ನೆರೆ ಉಂಟಾಗಿದೆ. ಸಿಡಿಲಿಗೆ ದೇವಸ್ಥಾನದ ಕೆಲ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದ್ದು ಮೂಲ್ಕಿ ಪರಿಸರದಲ್ಲಿ ಸಭೆ ಸಮಾರಂಭ ಹಾಗೂ ನೇಮೋತ್ಸವಕ್ಕೆ ಮಳೆಯಿಂದಾಗಿ ಅಡ್ಡಿಯಾಗಿದೆ. ಶಿಮಂತೂರು ದೇವಸ್ಥಾನ ಕುಬೆವೂರು ಪ್ರಧಾನ ರಸ್ತೆಯ ವಿದ್ಯುತ್ ಕಂಬಕ್ಕೆ ಮರ ಬಿದ್ದು ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು.

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪುನರೂರು ತೋಟಮನೆ ಸಾವಿತ್ರಿ ಆರ್. ದೇವಾಡಿಗ ಅವರ ಮನೆಗೆ ಸಿಡಿಲು ಬಡಿದು ಪುಷ್ಪಾ ಎಂಬವರಿಗೆ ಗಾಯವಾಗಿದೆ. ಮನೆಯ ವಿದ್ಯುತ್ ಉಪಕರಣಗಳು ಹಾಗೂ ವಿದ್ಯುತ್ ವಯರಿಂಗ್ ಸುಟ್ಟು ಹೋಗಿದ್ದು ಸುಮಾರು ೧ ೫ ಲಕ್ಷ ರು. ತನಕ ನಷ್ಟ ಉಂಟಾಗಿದೆ. ಕಿನ್ನಿಗೋಳಿ ಬಸ್‌ ನಿಲ್ದಾಣದ ಸಮೀಪದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗೆ ಮೂರು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಗದ್ದೆಯಲ್ಲಿ ತುಂಬಿದ ನೀರು.: ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನಕೆರೆ ಅಂಚೆಕಚೇರಿಯ ಪರಿಸರದಲ್ಲಿ ಚರಂಡಿ ಸಮಸ್ಯೆ ಹಾಗೂ ಪಕ್ಕದಲ್ಲಿ ಲೇ ಔಟ್‌ ನಿರ್ಮಾಣದಿಂದ ಮಳೆ ನೀರು ಗದ್ದೆಗಳಲ್ಲಿ ತುಂಬಿ ಕೃತಕ ನೆರೆ ಉಂಟಾಗಿತ್ತು.

ಕೆಂಚನಕೆರೆಯಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಯ ಮೋರಿಯಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಿದ್ದರಿಂದ ಮಳೆ ನೀರು ಹರಿಯಲು ತಡೆ ಉಂಟಾಗುತ್ತಿದೆ. ಕಸ ಕಡ್ಡಿಗಳು ತುಂಬಿ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಲಾಗಿದೆ. ಈ ಭಾಗದಲ್ಲಿ ಮುಖ್ಯ ರಾಜ್ಯ ಹೆದ್ದಾರಿಗೆ ಅಗಲವಾದ ಪೈಪ್ ಆಳವಡಿಸಿ ಮೋರಿ ನಿರ್ಮಾಣ ಮಾಡಬೇಕು ಹಾಗೂ ಇಕ್ಕೆಲಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಆಗಬೇಕಾಗಿದೆ ಇಲ್ಲದಿದ್ದರೆ ಮುಂದೆಯೂ ಇಂತಹ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಸೂಚಿಸಿದ್ದಾರೆ.