ವಿಧಾನಸೌಧ ಎದುರು ಇಂದು ಸಿಎಂ ಮೊದಲ ಜನಸ್ಪಂದನ

| Published : Feb 08 2024, 01:33 AM IST / Updated: Feb 08 2024, 07:47 AM IST

ವಿಧಾನಸೌಧ ಎದುರು ಇಂದು ಸಿಎಂ ಮೊದಲ ಜನಸ್ಪಂದನ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮವನ್ನು ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮವನ್ನು ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿದ್ದು, ಬರೋಬ್ಬರಿ 10 ಸಾವಿರ ಸಾರ್ವಜನಿಕರ ಆಗಮನ ನಿರೀಕ್ಷೆಯಲ್ಲಿ ಇಲಾಖಾವಾರು ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಸಲುವಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ವಿಧಾನಸೌಧ ಆವರಣದಲ್ಲಿ ಮುಖ್ಯಮಂತ್ರಿಯೊಬ್ಬರು ಜನತಾ ದರ್ಶನ ನಡೆಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.ಬೆಳಗ್ಗೆ 8 ಗಂಟೆಯಿಂದಲೇ ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರು ಸಲ್ಲಿಸುವ ದೂರು ಹಾಗೂ ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಕೌಂಟರ್‌ ತೆರೆಯಲು ಸಿದ್ಧತೆ ಮಾಡಲಾಗಿದೆ. 

ಪ್ರತಿ ಕೌಂಟರ್‌ಗೂ ಅಧಿಕಾರಿಗಳನ್ನು ನಿಯೋಜನೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಸ್‌ಒಪಿ ಜಾರಿ ಮಾಡಿದೆ.

ಇಲಾಖಾವಾರು ಕೌಂಟರ್: ಜನತಾ ದರ್ಶನ ನಡೆಯುವ ಸ್ಥಳದಲ್ಲಿ ಸಚಿವಾಲಯದ ಎಲ್ಲಾ ಇಲಾಖೆಗಳ 28 ಸ್ಟಾಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಸ್ಟಾಲ್‌ಗೆ ನಿಗದಿತ ಸಂಖ್ಯೆಯನ್ನು ನೀಡಲಾಗಿದೆ.ನೋಡಲ್‌ ಅಧಿಕಾರಿಗಳು ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ ಸ್ಟಾಲ್‌ ನಂಬರ್‌ ನೀಡಿ ಕಳುಹಿಸಲಿದ್ದಾರೆ. 

ಅಧಿಕಾರಿಗಳು ವಿಚಾರಣೆ ನಡೆಸಿ ನಾಗರಿಕರ ಮೊಬೈಲ್ ಸಂಖ್ಯೆ ಮತ್ತು ಪ್ರಾಥಮಿಕ ವಿವರಗಳನ್ನು ಹಾಗೂ ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ದಾಖಲು ಮಾಡಿಕೊಳ್ಳಲಿದ್ದಾರೆ. ನಂತರ ಮುಖ್ಯಮಂತ್ರಿಗಳ ಬಳಿಗೆ ಕಳುಹಿಸಿ ಅವರ ನಿರ್ದೇಶನದ ಮೇರೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಟಾಲ್‌ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ವಯೋವೃದ್ಧರು, ವಿಕಲಚೇತನರು, ಗರ್ಭಿಣಿಯರು ಹಾಗೂ ಪುಟ್ಟಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ.

ಜತೆಗೆ ವಯೋವೃದ್ಧರು, ಹಿರಿಯ ನಾಗರಿಕರು, ವಿಕಲಚೇತನರು, ಗರ್ಭಿಣಿಯರಿಗಾಗಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಊಟ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೆಜೆಸ್ಟಿಕ್‌ನಿಂದ ಬರುವವರೆಗೆ ಉಚಿತ ಬಿಎಂಟಿಸಿ ಬಸ್‌ ಸೇವೆ ಒದಗಿಸಲಾಗಿದೆ.

ಸಿಬ್ಬಂದಿಗೆ ನಿರ್ದೇಶನ: ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ವಿಧಾನಸೌಧ ಪಶ್ಚಿಮ ದ್ವಾರ ಹಾಗೂ ದಕ್ಷಿಣ ದ್ವಾರದಿಂದ ಪ್ರವೇಶಿಸಬೇಕು. ವಿಕಾಸಸೌಧದ ತಳ ಮಹಡಿ-2 ಹಾಗೂ ಗೇಟ್‌ ನಂಬರ್ 2ರ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ಮಾತ್ರ ವಾಹನ ನಿಲ್ಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

3738 ಅರ್ಜಿ ವಿಲೇವಾರಿ: ನವೆಂಬರ್ 27 ರಂದು ನಡೆದ ಜನತಾ ದರ್ಶನದಲ್ಲಿ 4030 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈವರೆಗೆ 3738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.