ಕನ್ನಡಪ್ರಭ ವಾರ್ತೆ ಕುಶಾಲನಗರ ಟಿಬೆಟಿಯನ್ 11ನೇ ಪಂಚೆನ್ ಲಾಮ ಅವರ 37ನೇ ವರ್ಷದ ಹುಟ್ಟುಹಬ್ಬ ಆಚರಣೆ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತ ಶಿಬಿರದಲ್ಲಿ ನಡೆಯಿತು.ಬೈಲುಕುಪ್ಪೆಯ ತಶಿ ಲಂಪೋ ಬೌದ್ಧ ಮಂದಿರದಲ್ಲಿ ನಡೆದ ಸಾಂಪ್ರದಾಯಿಕ ಕಾರ್‍ಯಕ್ರಮದಲ್ಲಿ ಶಿಬಿರದ ಬೌದ್ಧ ಧಾರ್ಮಿಕ ಗುರುಗಳು ಮತ್ತು ಬೌದ್ಧ ಭಿಕ್ಷುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ, ಶುಭ ಕೋರಿದರು. 10ನೇ ಪಂಚೆನ್ ಲಾಮ ಚೀನಾ ದುರಾಡಳಿತದಲ್ಲಿ ರಹಸ್ಯವಾಗಿ ಸಾವಿಗೀಡಾದಾಗ ದಲಾಯಿಲಾಮ ಅವರು ಆರು ವರ್ಷದ ಗೆಡುನ್ ಚೋಕಿ ನೀಮ ಅವರನ್ನು 11ನೇ ಪಂಚೆನ್ ಲಾಮರನ್ನಾಗಿ 1995ರಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಆರು ವರ್ಷದ ಪಂಚೆನ್ ಲಾಮ ಅವರನ್ನು ಚೀನಾ ಸರ್ಕಾರ ಬಲವಂತವಾಗಿ ಬಂಧಿಸಿ ರಾಜಕೀಯ ಕೈದಿಯನ್ನಾಗಿಸಿತು. ನಂತರ ಇದುವರೆಗೆ ಪಂಚೆನ್ ಲಾಮ ಅವರ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಚೀನಾ ಆಡಳಿತ ನೀಡದೆ ಅನ್ಯಾಯ ಮಾಡಿದೆ ಎಂದು ಟಿಬೆಟಿಯನ್ನರು ಪ್ರತಿ ವರ್ಷ ಪಂಚೆನ್ ಲಾಮ ಅವರ ಶೀಘ್ರ ಬಿಡುಗಡೆಗೆ ಆಗ್ರಹಿಸುದರೊಂದಿಗೆ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬೈಲುಕೊಪ್ಪೆ ತಶಿ ಲಂಫೋ ಬೌದ್ಧ ಮಂದಿರದಲ್ಲಿ ಪಂಚೆನ್ ಅವರ ಹುಟ್ಟುಹಬ್ಬ ಅಂಗವಾಗಿ ವಿಶೇಷ ಪ್ರಾರ್ಥನೆಯೊಂದಿಗೆ ಅವರ ಬಿಡುಗಡೆಗಾಗಿ ವಿಶ್ವ ಸಮುದಾಯಕ್ಕೆ ಮನವಿ ಮಾಡಿದೆ. ಇದೇ ಸಂದರ್ಭ ಟಿಬೆಟಿಯನ್ ನಾಗರಿಕರಿಂದ ಸಾಂಪ್ರದಾಯಿಕ ನೃತ್ಯ ಕಾರ್‍ಯಕ್ರಮ ಜರುಗಿತು.