ಬಿಜೆಪಿ ಮುಧೋಳ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಗುರುವಾರ ಸೇವಾ ಸಂಕಲ್ಪ ಅಭಿಯಾನ ಹಾಗೂ ಬೂತ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಮುಧೋಳ
ಮುಂಬರುವ ತಾಪಂ, ಜಿಪಂಗಳಿಗೆ ಚುನಾವಣೆ ನಡೆಯಲಿವೆ, ಈ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಬಹಳ ಮುಖ್ಯವಾದದು, ಗುತ್ತಿಗೆದಾರರಿಗೆ ಅಥವಾ ಹಣವಂತರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದೆ, ಯಾರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ, ಯಾರು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದಾರೆ, ನಿಷ್ಠಾವಂತ ಕಾರ್ಯಕರ್ತರಿದ್ದಾರೆ, ಅಂತಹವರನ್ನು ಗುರುತಿಸಿ ಅವರಿಗೆ ಮಾತ್ರ ಟಿಕೆಟ್ ನೀಡುವ ಮೂಲಕ ಅವರನ್ನು ಗೆಲ್ಲಿಸಿಕೊಡುವಂತೆ ಬಿಜೆಪಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧ್ಯಕ್ಷ- ಉಪಾಧ್ಯಕ್ಷ, ಪದಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ನಗರದ ಬಸವೇಶ್ವರ ಕಲ್ಯಾಣ ಮಂಟಪದ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಮುಧೋಳ ನಗರ ಹಾಗೂ ಗ್ರಾಮೀಣ ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ಬೂತ್ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯ 25 ವರ್ಷಗಳ (ಸೇವಾ, ಸಂಕಲ್ಪ ಮತ್ತು ರಾಷ್ಟ್ರ ಪ್ರಥಮ) ಸಂದೇಶವನ್ನು ಜನರಿಗೆ ತಲುಪಿಸುವುದು ಮತ್ತು ಬಿಜೆಪಿ ಸಂಘಟನೆಯನ್ನು ಬೂತ್ ಮಟ್ಟದಲ್ಲಿ ಬಲಪಡಿಸಿ, ಚುನಾವಣೆಗೆ ಸಜ್ಜುಗೊಳಿಸುವುದು ಮತ್ತು ವಿವಿಧ ಸೇವಾ ಸಂಕಲ್ಪ ಅಭಿಯಾನ ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಇಬ್ಬರು ಮುಖ್ಯಮಂತ್ರಿಗಳು ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಸುಳ್ಳು ಭರವಸೆ ನೀಡುತ್ತಾ ರಾಜ್ಯಭಾರ ಮಾಡುತ್ತಿದ್ದಾರೆ. ಉಚಿತ ಗ್ಯಾರಂಟಿ ಯೋಜನೆಯೇ ದೊಡ್ಡ ಸಾಧನೆ ಎಂದು ಭಾವಿಸಿದ್ದಾರೆ. ಸಮರ್ಪಕ ಮಳೆಯಾಗದೆ ರಾಜ್ಯದಲ್ಲಿ ಭೀಕರ ಬರ ಬಿದ್ದಿದ್ದೆ, ಇದರಿಂದ ರಾಜ್ಯದ ರೈತರು ಈಗ ಕಂಗಾಲಾಗಿದ್ದಾರೆ. ಬರ ಪರಿಹಾರ ಮತ್ತು ಯುಕೆಪಿ ಯೋಜನೆಯ ಮುಳಗಡೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸಲಿದ್ದಾರೆ, ಬಿಜೆಪಿಯ 135 ರಿಂದ 140 ಅಭ್ಯರ್ಥಿಗಳು ಗೆಲ್ಲುವುದರ ಮೂಲಕ ಮತ್ತೊಮ್ಮೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ ನಿರಾಣಿ ಮಾತನಾಡಿ, 25ವರ್ಷಗಳ ಹಿಂದೆ ಮುಧೋಳ ತಾಲೂಕು ಯಾವುದೇ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿರಲಿಲ್ಲ, ಈಗ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿದೆ, ಇದನ್ನು ಗಮನಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಯಾವ ರೀತಿ ಅಭಿವೃದ್ಧಿ ಪಡಿಸಿದ್ದಾರೆ ಎಂಬುದನ್ನು ನೀವೇ ಉಹಿಸಬಹುದು. ನರೇಂದ್ರ ಮೋದಿ ಅವರು ನಮ್ಮ ದೇಶಕ್ಕೆ ಪ್ರಧಾನಿಯಾಗಿರುವುದು ದೇಶದ ಜನರ ಸೌಭಾಗ್ಯವೆಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಏನೇನು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಏನೇನು ಅಭಿವೃದ್ಧಿ ಕೆಲಸ-ಕಾರ್ಯಗಳಾಗಿವೆ ಎಂಬುದನ್ನು ಸಮಗ್ರವಾಗಿ ವಿವರಿಸಿದರು.ಚಿತ್ರದುರ್ಗದ ಸಂಸದ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕರಾದ ದೌಡ್ಡನಗೌಡ ಪಾಟೀಲ, ಜಿ.ಎಸ್. ನ್ಯಾಮಗೌಡ, ಪಿ.ರಾಜೀವ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಮಗೌಡ, ಜಿಲ್ಲಾಧ್ಯಕ್ಷ ಶಾಂತನಗೌಡ ಪಾಟೀಲ, ಸಂಜಯ ಪಾಟೀಲ, ಬಸವರಾಜ ಯಂಕಂಚಿ, ಅರುಣ ಕಾರಜೋಳ, ಸಂಗನಗೌಡ ಕಾತರಕಿ, ಕೆ.ಎಸ್. ಹಿರೇಮಠ ಸೇರಿ ಬಿಜೆಪಿ ಮುಖಂಡರು ವೇದಿಕೆ ಮೇಲಿದ್ದರು. ನಾಗಪ್ಪ ಅಂಬಿ ಸ್ವಾಗತಿಸಿ, ನಿರೂಪಿಸಿದರು, ಗುರುಪಾದ ಕುಳಲಿ ವಂದಿಸಿದರು.
ಬಿಜೆಪಿ ಮುಧೋಳ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಬೈಕ್ ರ್ಯಾಲಿ, ರಕ್ತದಾನ ಶಿಬಿರ ಮತ್ತು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.