ಬಂಡೀಪುರ ಹುಲಿದಾಳಿಗೆ ಕುರಿಗಾಹಿ ಬಲಿ

| Published : Dec 13 2023, 01:00 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಹುಲಿಯೊಂದು ಆದಿವಾಸಿ ವ್ಯಕ್ತಿಯೊಬ್ಬನ ದೇಹವನ್ನು ಬಹುತೇಕ ತಿಂದು ಹಾಕಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಬಂಡೀಪುರ ಕಾಡಂಚಿನ ಮಂಗಲ ಬಳಿಯ ಆಡಿನ ಕಣಿವೆಯ ನಿವಾಸಿ ಜೇನುಕುರುಬ ಜನಾಂಗದ ಬಸವ (೫೪) ಮೃತ ವ್ಯಕ್ತಿ. ಆತನ ಅರ್ಧಂಬದ್ಧ ದೇಹ ಕುಂದಕೆರೆ ವಲಯದ ವೀರೇಶ್ವರ ಗುಡ್ಡದಲ್ಲಿ ಪತ್ತೆಯಾಗಿದೆ

ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಘಟನೆ । ಜೇನುಕುರುಬ ಸಮುದಾಯಕ್ಕೆ ಸೇರಿದ ಸಂತ್ರಸ್ತ । ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಹುಲಿಯೊಂದು ಆದಿವಾಸಿ ವ್ಯಕ್ತಿಯೊಬ್ಬನ ದೇಹವನ್ನು ಬಹುತೇಕ ತಿಂದು ಹಾಕಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಬಂಡೀಪುರ ಕಾಡಂಚಿನ ಮಂಗಲ ಬಳಿಯ ಆಡಿನ ಕಣಿವೆಯ ನಿವಾಸಿ ಜೇನುಕುರುಬ ಜನಾಂಗದ ಬಸವ (೫೪) ಮೃತ ವ್ಯಕ್ತಿ. ಆತನ ಅರ್ಧಂಬದ್ಧ ದೇಹ ಕುಂದಕೆರೆ ವಲಯದ ವೀರೇಶ್ವರ ಗುಡ್ಡದಲ್ಲಿ ಪತ್ತೆಯಾಗಿದೆ.

ಮೃತ ಬಸವ ಕುರಿ ಮೇಯಿಸಲು ಕಾಡಿಗೆ ತೆರಳಿದ್ದಾಗ ಮನೆಗೆ ವಾಪಸ್‌ ಬಂದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಬಸವನ ಸಂಬಂಧಿಕರು ಆಡಿನ ಕಣಿವೆ ಸುತ್ತ ಮುತ್ತ ಹುಡುಕಾಡುತ್ತಿದ್ದಾಗ ವೀರೇಶ್ವರ ಗುಡ್ಡದಲ್ಲಿ ಅರ್ಧಂಬರ್ಧ ಶವ ಕಂಡಿದೆ.

ಈ ವಿಷಯ ತಿಳಿದು ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್.ಪರಶಿವಮೂರ್ತಿ, ಸಬ್‌ ಇನ್‌ಸ್ಪೆಕ್ಟರ್‌ ಸಾಹೇಬ ಗೌಡ ಆರ್.ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಿಲ್ಲದ ಮಾನವ, ಪ್ರಾಣಿ ಸಂಘರ್ಷ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದೆರಡು ಮಾಸದಿಂದ ಮಾನವ, ಪ್ರಾಣಿ ಸಂಘರ್ಷ ಹೆಚ್ಚಿದ್ದು ಐವರು ಪ್ರಾಣ ಕಳೆದುಕೊಂಡಿದ್ದಾರೆ.

ನ.೨೪ ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದ ಬಳ್ಳೂರು ಹುಂಡಿ ಗ್ರಾಮದ ರತ್ನಮ್ಮ ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಕುಂದಕೆರೆ ವಲಯದಲ್ಲಿ ಜೇನುಕುರುಬ ಜನಾಂಗದ ಬಸವ ಹುಲಿ ದಾಳಿಗೆ ಸಿಲುಕಿ ಜೀವ ಕಳೆದುಕೊಂಡಿದ್ದಾರೆ.

ಕಳೆದ ಸೆ.೪ ರಂದುಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ಎಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದ ಬಾಲಕ ಚರಣ್‌ ಹುಲಿಗೆ ಬಲಿಯಾಗಿದ್ದರು. ಅ.೨ ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ಹುಣಸೂರು ತಾಲೂಕಿನ ಉಡವೇಪುರದ ರೈತ ಗಣೇಶ್‌ ಹುಲಿ ದಾಳಿಗೆ ತುತ್ತಾಗಿದ್ದರು.

ಬಂಡೀಪುರ ವ್ಯಾಪ್ತಿಯ ಸರಗೂರು ತಾಲೂಕಿನ ಕಾಡಬೇಗೂರು ಗ್ರಾಮದ ಬಾಲಾಜಿ ನಾಯಕ್‌ ನ.೬ ರಂದು ಹುಲಿ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು. ಬಾಲಾಜಿ ನಾಯಕ್‌, ರತ್ನಮ್ಮ ಬಹುತೇಕ ಅಂಗಾಂಗವನ್ನು ಹುಲಿ ತಿಂದಿತ್ತು. ಕಂದಕೆರೆ ವಲಯದ ಆಡಿನ ಕಣಿವೆ ಬಳಿ ಹುಲಿ ದಾಳಿ ಮಾಡಿ ಮೃತ ಬಸವನ ಬಹುತೇಕ ದೇಹವನ್ನು ತಿಂದು ಹಾಕಿದೆ.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ಅವಧಿಯಲ್ಲಿ ಅತೀ ಹೆಚ್ಚು ಮಾನವ, ಪ್ರಾಣಿ ಸಂಘರ್ಷಗಳು ನಡೆದಿವೆ. ಐದು ಜನರ ಪ್ರಾಣ ಹೋಗಿದೆ.

ಪ್ರಾಣಿ ದಾಳಿಗೆ ರಾಜ್ಯ ಸರ್ಕಾರದ ಕ್ರಮ ಇಲ್ಲ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ, ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಮದ್ಯ ಪ್ರವೇಶಿಸಿ ಮಾನವ, ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾರಣರಾದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಂಡೀಪುರ ಸಂರಕ್ಷಿತ ಪ್ರದೇಶದಲ್ಲಿ ಅಧಿಕಾರಿಗಳ ಹೊಂದಾಣಿಕೆ ಇಲ್ಲ. ಬಂಡೀಪುರಕ್ಕೆ ವಿದೇಶಗಳಲ್ಲಿ ಹೆಸರಿದೆ. ಬಂಡೀಪುರಕ್ಕೆ ಕಳಂಕ ತರುತ್ತಿರುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆಯ ನಿವಾಸಿ ಬಸವನ ದೇಹ ಕುಂದಕೆರೆ ವಲಯದಲ್ಲಿ ಹುಲಿ ತಿಂದ ಅರ್ಧಂಬರ್ಧ ದೇಹ.

ಬಸವ

ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆಯ ಬಸವನ ದೇಹ ಸಿಕ್ಕ ಸ್ಥಳಕ್ಕೆ ಬಂಡೀಪುರ ಸಿಎಫ್‌ ಡಾ.ಪಿ.ರಮೇಶ್‌ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು.