ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲಜಾನುವಾರುಗಳ ಮೇಲೆ ದಾಳಿ ನಡೆಸಿ ಭೀತಿ ಹುಟ್ಟಿಸಿರುವ ಹುಲಿ ಸೆರೆಗೆ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಭಾನುವಾರದಿಂದ ಕಾರ್ಯಾಚರಣೆ ಆರಂಭವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದಿಂದ ಅಜಯ್ ಮತ್ತು ಶ್ರೀರಾಮ್ ಸಾಕಾನೆಗಳು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಅರವಳಿಕೆ ತಜ್ಞ ಡಾ. ಚಿಟ್ಯಪ್ಪ ಹಾಗೂ ಶಾರ್ಪ್ ಶೂಟರ್ ರಂಜನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮೇಲುಸ್ತುವಾರಿಯಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ವೆಸ್ಟ್ ನೆಮ್ಮಲೆಯಲ್ಲಿ ಜಾನುವಾರುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದ ಸ್ಥಳದಲ್ಲಿ ಜಾನುವಾರುವಿನ ಕಳೆಬದೊಂದಿಗೆ ಬೋನ್ ಇಡಲಾಗಿದೆ. ಸಂಕೇತ್ ಪೂವಯ್ಯ ಅವರು ಸ್ಥಳದಲ್ಲಿದ್ದು ಕಾರ್ಯಾಚರಣೆಯ ಪರಿಶೀಲನೆ ನಡೆಸಿದರು.ಸ್ಥಳದಲ್ಲಿ ಮಡಿಕೇರಿ ವನ್ಯಜೀವಿ ಡಿ.ಎಫ್.ಓ. ನೆಹರು, ತಿತಿಮತಿ ಎಸಿಎಫ್ ಗೋಪಾಲ್, ಶ್ರೀಮಂಗಲ ಆರ್.ಎಫ್.ಓ. ಅರವಿಂದ್ ಸೇರಿದಂತೆ ಸಿಬ್ಬಂದಿ ಇದ್ದಾರೆ. ಸ್ಥಳೀಯ ಪ್ರಮುಖರಾದ ಪಲ್ವಿನ್ ಪೂಣಚ್ಚ, ಮಾಣೀರ ವಿಜಯ ನಂಜಪ್ಪ, ಚೊಟ್ಟೆಯಾಡಮಾಡ ವಿಶು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.ಶಾಸಕ ಪೊನ್ನಣ್ಣ ಭೇಟಿ: ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದ ಸ್ಥಳಗಳಿಗೆ ಶನಿವಾರ ಭೇಟಿ ನೀಡಿದ ಶಾಸಕ ಎ.ಎಸ್. ಪೊನ್ನಣ್ಣ, ಸ್ಥಳದಲ್ಲಿ ಅರಣ್ಯಧಿಕಾರಿಗಳೊಂದಿಗೆ ಚರ್ಚೆನಡೆಸಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರು. ಅದರಂತೆ ಭಾನುವಾರ ಅರಣ್ಯ ಇಲಾಖೆಯಿಂದ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ. ಹೆಚ್ಚುವರಿ ಪರಿಹಾರ: ಹುಲಿ ದಾಳಿಯಿಂದ ಹಸು ಕಳೆದುಕೊಂಡ ಮಾಲಕ ಮಾಣೀರ ಕಿಶನ್ ಅವರಿಗೆ ಈಗಾಗಲೇ 30 ಸಾವಿರ ರು. ಪರಿಹಾರವನ್ನು ಅರಣ್ಯ ಇಲಾಖೆ ನೀಡಿದೆ, ವಿಶೇಷ ಪ್ರಕರಣದಡಿ ಹೆಚ್ಚುವರಿ ಪರಿಹಾರವನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಸಿ.ಎಫ್. ನೆಹರು ಅವರಿಗೆ ಶಾಸಕ ಪೊನ್ನಣ್ಣ ಸೂಚಿಸಿದರು.
ವನ್ಯಜೀವಿ ಪಿ.ಸಿ.ಸಿ.ಎಫ್ ಪುಷ್ಕರ್ ಅವರನ್ನು ಸ್ಥಳದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿ ಪ್ರಕರಣದ ಗಂಭೀರತೆ ಬಗ್ಗೆ ತಿಳಿಸಿದ ಶಾಸಕ ಪೊನ್ನಣ್ಣ, ಹುಲಿ ಸೆರೆ ಹಿಡಿಯಲೇಬೇಕಾದ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಪುಷ್ಕರ್ ಅವರು ಶಾಸಕರ ಸೂಚನೆಯಂತೆ ಅರಣ್ಯ ಇಲಾಖೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದರು.ಇನ್ನೊಂದು ಕಡೆ ಜಾನುವಾರುಗಳನ್ನು ಕೊಂದಿರುವ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಬೋನ್ ಇರಿಸಿ ಹುಲಿ ಸೆರೆ ಹಿಡಿಯಲೂ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಶ್ರೀಮಂಗಲ ವನ್ಯಜೀವಿ ವಿಭಾಗದ ಆರ್. ಎಫ್.ಓ. ಅರವಿಂದ್, ಕೊಡಗು ಬೆಳೆಗಾರ ಒಕ್ಕೂಟದ ಮಾಣೀರ ವಿಜಯ ನಂಜಪ್ಪ, ಸ್ಥಳೀಯ ಪ್ರಮುಖರಾದ ಚೊಟ್ಟೆಯಾಂಡಮಾಡ ವಿಶು, ಉದಯ, ಬೋಸು ವಿಶ್ವನಾಥ್, ತೀತಿರ ಪ್ರಭು, ಮಾಣೀರ ಉಮೇಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಸೂರಜ್ ಹೊಸೂರು, ನರೇಂದ್ರ ಕಾಮತ್, ಹುಲಿ ದಾಳಿಗೆ ಹಸು ಕಳೆದುಕೊಂಡ ಬೆಳೆಗಾರ ಮಾಣೀರ ಕಿಸಾನ್ ಮತ್ತಿತರರು ಇದ್ದರು.