ಉರುಳಿಗೆ ಸಿಲುಕಿ 8 ವರ್ಷ ಪ್ರಾಯದ ಹುಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಉರುಳಿಗೆ ಸಿಲುಕಿ ಅಂದಾಜು 8 ವರ್ಷ ಪ್ರಾಯದ ಹುಲಿಯೊಂದು ಮೃತಪಟ್ಟಿರುವ ಘಟನೆ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ.ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದ ಕೆಚ್ಚೆಟ್ಟೀರ ಕುಟುಂಬದ ತೋಟದಲ್ಲಿ ಹುಲಿಯೊಂದು ಸಾವಿಗೀಡಾಗಿದೆ. ತೋಟದ ಮಾಲೀಕರು ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತೋಟದ ಬೇಲಿಯಲ್ಲಿ ಹಾಕಲಾಗಿದ್ದ ಉರುಳಿಗೆ ಸಿಲುಕಿಕೊಂಡು ಈ ಹುಲಿ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.
ಹುಲಿಯ ಕಳೇಬರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಚೆಟ್ಟಳ್ಳಿ ಭಾಗದಲ್ಲಿ ಹುಲಿ ಓಡಾಟ ತೀರಾ ವಿರಳ. ಆದರೆ ಇದೀಗ ಉರುಳಿಗೆ ಸಿಲುಕಿ ಮೃತಪಟ್ಟಿದ್ದು, ಈ ಭಾಗದ ಜನರು ತೀವ್ರ ಆತಂಕಗೊಂಡಿದ್ದಾರೆ.ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿ ರಕಚಷಿತ್ , ವೈದ್ಯಾಧಿಕಾರಿ ಡಾ. ಮುಜೀಬ್, ಡಾ. ಸಂಜೀವ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.