ಸಾರಾಂಶ
ಹನೂರು: ಮಲೆಮಹದೇಶ್ವರ ವನ್ಯಜೀವಿಧಾಮ ಪಚ್ಚೆದೊಡ್ಡಿ ಸಮೀಪ ಹುಲಿ ಕೊಂದು ಮೂರು ಪೀಸ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದೆ. ಹನೂರು ತಾಲೂಕಿನ ಪಚ್ಚೆದೊಡ್ಡಿ ಸಮೀಪ ಹುಲಿ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪಚ್ಚೆದೊಡ್ಡಿ ಗ್ರಾಮದ ಪ್ರಮುಖ ಆರೋಪಿ ಪಚ್ಚಮಲ್ಲ ಆಲಿಯಾಸ್ ಸಣ್ಣ ಈತನ ಇಬ್ಬರು ಸಹಚರರಾದ ಗಣೇಶ್ ,ಗೋವಿಂದೇಗೌಡ,ಹಾಗೂ ಮಂದೆಕುರಿ ಮೇಯಿಸುತ್ತಿದ್ದ ಮಂಜುನಾಥ್, ಕಂಬಣ್ಣನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಅಂತಿಮಗೊಂಡ ನಂತರ ಸತ್ಯ ಹೊರಬರಲಿದೆ ಎಂದು ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.
ಹುಲಿಯನ್ನು ಕೊಂದು ಮೂರು ಭಾಗಗಳಾಗಿ ತುಂಡರಿಸಿ ಅರಣ್ಯದಲ್ಲೇ ಹುದುಗಿಸಿಟ್ಟಿದ್ದ ಗುಮಾನಿ ಮೇಲೆ ಐವರನ್ನು ವಶಕ್ಕೆ ಪಡೆದಿದ್ದು ಪ್ರತಿಕಾರಕ್ಕೆ ಈತ ಹುಲಿ ಕೊಂದಿದ್ದಾನೆಂದು ಉನ್ನತ ಮೂಲಗಳು ಪತ್ರಿಕೆಗೆ ತಿಳಿಸಿವೆ.ಹುಲಿ ಹತ್ಯೆಯಲ್ಲಿ ಐವರು ಭಾಗಿಯಾದ್ದಾರೆ, ಇವರಿಗೆ ಯಾರದಾರೂ ಕೈ ಜೋಡಿಸಿದರೇ, ಭಾರೀ ಗಾತ್ರದ ಹುಲಿಯನ್ನು ಈತ ಕೊಂದಿದ್ದು ಹೇಗೆ? ಎಂಬುದು ವಿಚಾರಣೆ ಬಳಿಕ ತಿಳಿದು ಬರಬೇಕಿದೆ.ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಬಗ್ಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಪ್ರತಿಕ್ರಿಯಿಸಿ, ಪಚ್ಚೆದೊಡ್ಡಿ ಗ್ರಾಮದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಬಳಿಕವಷ್ಟೇ ಮಾಹಿತಿ ಬಹಿರಂಗಗೊಳಿಸಲಾಗುವುದು, ಹುಲಿ ಕೊಂದ ಬಗೆ ಬಗ್ಗೆ ಎಫ್ಎಸ್ಎಲ್ ವರದಿ ಕಾಯುತ್ತಿದ್ದೇವೆ ಎಂದು ಹೇಳಿದರು.ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ:ಅರಣ್ಯ ಸಚಿವ ಈಶ್ವರ್ ಖಂಡ್ರೆ ಹುಲಿ ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿ ಪಿಸಿಸಿಎಫ್ ಸ್ಮಿತಾ ನೇತೃತ್ವದಲ್ಲಿ ತನಿಖೆ ನಡೆಸಿ 8 ದಿನಗಳಲ್ಲಿ ವರದಿ ಕೊಡುವಂತೆ ಸೂಚಿಸಿದ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.ಪಿಸಿಸಿಎಫ್ ಸ್ಮಿತಾ ಬಿಜ್ಜೂರು, ಎಪಿಸಿಸಿಎಫ್ ರಮೇಶ್ ತ್ರಿಪಾಠಿ, ಹುಲಿ ಯೋಜನೆಗಳ ಮೈಸೂರು ವಿಭಾಗದ ನಿರ್ದೇಶಕ ರಮೇಶ್ ಕುಮಾರ್ ತಂಡ ಸ್ಥಳಕ್ಕೆ ಭೇಟಿ ಕೊಟ್ಟು ಹುಲಿ ಕಳೇಬರ ದೊರೆತ ಸ್ಥಳಗಳನ್ನು ಪರಿಶೀಲಿಸಿದರು. ಅರಣ್ಯ ಇಲಾಖೆ ಸಿಬ್ಬಂದಿಯಿಂದ ಸಮಗ್ರ ಮಾಹಿತಿ ಪಡೆದ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು.