ಸಾರಾಂಶ
ಪಚ್ಚೆದೊಡ್ಡಿಯಲ್ಲಿ ಹುಲಿ ಕೊಂದು ಮೂರು ತುಂಡು ಮಾಡಿದ್ದ ದುರುಳರು
ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿ ಹತ್ಯೆ ಪ್ರಕರಣದ ತನಿಖೆ ಅಂತಿಮ ಘಟ್ಟಕ್ಕೆ ಬಂದಿದ್ದು, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಾಲ್ವರು ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಪಚ್ಚಮಲ್ಲ, ಗಣೇಶ್, ಗೋವಿಂದೇಗೌಡ, ಸಂಪು ಎಂಬವರನ್ನು ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ನಾಲ್ವರನ್ನು ಕೂಡ ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದ್ದರಿಂದ ರೊಚ್ಚಿಗೆದ್ದ ದನಗಾಹಿಗಳು ಬೇಟೆಯಾಡಿದ್ದ ಹಸುವಿಗೆ ವಿಷ ಪ್ರಾಷನ ಮಾಡಿಸುವ ಮೂಲಕ ಮತ್ತು ಅದೇ ಹಸುವನ್ನು ತಿಂದು ಹುಲಿ ಸಾಯುವಂತೆ ಮಾಡಿದ್ದರು. ಬಳಿಕ ಅದರ ಕಳೆಬರವನ್ನು ತುಂಡು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.ಹುಲಿ ಬೇಟೆಯಾಡಿದ್ದ ಹಸುವಿನ ಕಳೆಬರಕ್ಕಾಗಿ ಅರಣ್ಯ ಇಲಾಖೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಶಿರಾದಿಂದ ಕುರಿಗಳನ್ನು ಮೇಯಿಸಲು ಬಂದಿದ್ದ ಕಂಬಣ್ಣ ಹಾಗೂ ಮಂಜುನಾಥ್ ವಿಚಾರಣೆ ಮುಂದುವರೆದಿದೆ. ಸದ್ಯ, ನಾಲ್ವರು ಆರೋಪಿಗಳಿಗೂ ವೈದ್ಯಕೀಯ ಪರೀಕ್ಷೆ ಮಾಡಿಸಿ ಅರಣ್ಯಾಧಿಕಾರಿಗಳು ಕರೆದೊಯ್ದಿದ್ದಾರೆ.ಘಟನೆ ಹಿನ್ನೆಲೆ:
ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುವಾಗ ಮಣ್ಣಿನಲ್ಲಿ ಹುದುಗಿಸಿದ್ದ ಹುಲಿಯ ಅರ್ಧ ಕಳೆಬರ ಪತ್ತೆಯಾಗಿತ್ತು. ಕೂಡಲೇ ಅಲರ್ಟ್ ಆದ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿ ಹುಡುಕಾಡಿದ್ದರು. ಆಗ ಅಲ್ಲಿ ಉಳಿದ ಭಾಗಗಳು ಪತ್ತೆಯಾಗಿದ್ದು, ಹುಲಿಯ ಉಗುರು, ಹಲ್ಲು ಹಾಗೂ 4 ಕಾಲುಗಳು ಸುರಕ್ಷಿತವಾಗಿವೆ. ಮೃತ ಹುಲಿಯು ಗಂಡಾಗಿದ್ದು, ಅದಕ್ಕೆ 12 ವರ್ಷ ವಯಸ್ಸು ಆಗಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದರು.ಪ್ರತೀಕಾರಕ್ಕೆ ಹುಲಿಯ ದೇಹ ತುಂಡು: ಹುಲಿಯ ಉಪಟಳಕ್ಕೆ ಬೇಸತ್ತು ಪ್ರತೀಕಾರಕ್ಕಾಗಿ ಹುಲಿಯನ್ನು ಕೊಲ್ಲಲಾಗಿದೆ ಎಂದು ಶಂಕಿಸಲಾಗಿದೆ. ಹುಲಿ ಕೊಂದ ಬಳಿಕ ಕೊಡಲಿಯಿಂದ ಹುಲಿಯನ್ನು ಮೂರು ಭಾಗಗಳಾಗಿ ಮಾಡಿ ಎರಡು ಭಾಗವನ್ನು ಮಣ್ಣಿನಿಂದ ಮತ್ತೊಂದು ಭಾಗವನ್ನು ಎಲೆಗಳಿಂದ ಮುಚ್ಚಲಾಗಿದ್ದನ್ನು ಪತ್ತೆ ಹಚ್ಚಲಾಗಿತ್ತು.
ಎನ್ಟಿಸಿಎ ನಿಯಮಾನುಸಾರ ಬಂಡೀಪುರದ ಪಶು ವೈದ್ಯ ಡಾ. ವಾಸಿಂ ಮಿರ್ಜಾ, ಹನೂರಿನ ಪಶು ವೈದ್ಯಾಧಿಕಾರಿ ಸಿದ್ದರಾಜು, ಎನ್ ಜಿ ಒ ಸದಸ್ಯರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಿ ಹುಲಿಯ ಅಂಗಾಂಗಗಳನ್ನು ವಿಧಿ - ವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಹುಲಿ ಹತ್ಯೆ ಮಾಡಿರುವವರ ಬಗ್ಗೆ ಈಗಾಗಲೇ ಸುಳಿವು ಗೊತ್ತಾಗಿದ್ದು, ನಾಲ್ವರನ್ನು ಬಂಧಿಸಿ ಇಬ್ಬರನ್ನು ತೀವ್ರ ವಿಚಾರಣೆ ಮಾಡಲಾಗುತ್ತಿದೆ ಮತ್ತೊಬ್ಬ ಪರಾರಿಯಾಗಿದ್ದು ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮ ಡಿಸಿಎಫ್ ಭಾಸ್ಕರ್ ಮಾಹಿತಿ ನೀಡಿದರು.