ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ದಕ್ಷಿಣ ಕೊಡಗಿನಲ್ಲಿ ಕಳೆದ ಹಲವು ದಿನಗಳಿಂದ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಪೊನ್ನಂಪೇಟೆ ತಾಲೂಕಿನ ಬೆಸಗೂರಿನಲ್ಲಿ ಭೀಮ ಹಾಗೂ ಮಹೇಂದ್ರ ಸಾಕಾನೆ ಬಳಸಿ ಕಾರ್ಯಾಚರಣೆ ನಡೆಸಲಾಗಿದ್ದು, ಅಂದಾಜು 6 ವರ್ಷ ಪ್ರಾಯದ ಗಂಡು ಹುಲಿ ಸೆರೆಯಾಗಿದೆ. ಎಸಿಎಫ್ ಗೋಪಾಲ್ ನೇತೃತ್ವದಲ್ಲಿ 80 ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಕಳೆದ ಒಂದು ತಿಂಗಳಲ್ಲಿ 7 ಹಸುಗಳನ್ನು ಬಲಿಪಡೆದಿತ್ತು. ಹುಲಿ ಸೆರೆ ಹಿಡಿಯುವಂತೆ ರೈತಸಂಘ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸೆರೆ ಹಿಡಿದ ಹುಲಿಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲಾಗಿದೆ. ಪೊನ್ನಂಪೇಟೆಯ ಬೆಸಗೂರಿನಲ್ಲಿ ಮಂಗಳವಾರ ಸೆರೆಸಿಕ್ಕ ಜಾನುವಾರು ಭಕ್ಷಕ ಹುಲಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸೌಧದ ತಮ್ಮ ಕಚೇರಿಯಲ್ಲಿದ್ದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ವಿಧಾನಸೌಧದಿಂದ ಮೆಟ್ರೋ ಮುಖಾಂತರ ಕೆಂಗೇರಿಗೆ ತೆರಳಿ, ಸೆರೆ ಸಿಕ್ಕ ಹುಲಿಯೊಂದಿಗೆ ಬನ್ನೇರುಘಟ್ಟಕ್ಕೆ ತೆರಳುತ್ತಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.