ಸುಳುಗೋಡು- ದೇವನೂರು ಗ್ರಾಮದಲ್ಲಿ ಹುಲಿ ಕಾಡಿಗಟ್ಟುವ ಕಾರ್ಯಾಚರಣೆ ಚುರುಕು

| Published : Jan 22 2025, 12:36 AM IST

ಸುಳುಗೋಡು- ದೇವನೂರು ಗ್ರಾಮದಲ್ಲಿ ಹುಲಿ ಕಾಡಿಗಟ್ಟುವ ಕಾರ್ಯಾಚರಣೆ ಚುರುಕು
Share this Article
  • FB
  • TW
  • Linkdin
  • Email

ಸಾರಾಂಶ

ಸುಳುಗೋಡು- ದೇವನೂರು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದ ಬೆನ್ನಲ್ಲೇ ಇದೀಗ ಗ್ರಾಮದಲ್ಲಿ ಸಾಕಾನೆಗಳ ಸಹಾಯದಿಂದ ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಅಗತ್ಯಬಿದ್ದರೆ ಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕು ಸುಳುಗೋಡು- ದೇವನೂರು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದ ಬೆನ್ನಲ್ಲೇ ಇದೀಗ ಗ್ರಾಮದಲ್ಲಿ ಸಾಕಾನೆಗಳ ಸಹಾಯದಿಂದ ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಅಗತ್ಯಬಿದ್ದರೆ ಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ತಿತಿಮತಿ ಸಮೀಪ ಮತ್ತಿಗೋಡು ಕಾಡಾನೆ ಶಿಬಿರದಿಂದ ಮೃಗಾಲಯ ಅಭಿಮನ್ಯು ಹಾಗೂ ಶ್ರೀಕಂಠ ಎಂಬ ಎರಡು ಸಾಕಾನೆಗಳನ್ನು ಬಳಸಿಕೊಂಡು ಹುಲಿ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯದ ಅಂಚಿನಲ್ಲಿರುವ ರಸ್ತೆ ಮೂಲಕ ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ಮುಂದುವರಿದಿದೆ.

ಕಾಫಿ ಫಸಲು ನಷ್ಟವಾಗುವ ಹಿನ್ನೆಲೆಯಲ್ಲಿ ಕಾಫಿ ತೋಟದ ಒಳಗೆ ಕಾರ್ಯಾಚರಣೆಗೆ ಸಾಕಾನೆಗಳನ್ನು ಬಳಸುತ್ತಿಲ್ಲ.ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಮಂಗಳವಾರ ಸಂಜೆ ವರೆಗೆ ಹುಳಿಯ ಸುಳಿವು ಸಿಕ್ಕಿಲ್ಲ. ಸ್ಥಳದಲ್ಲಿ ಒಂದು ಬೋನು ಅಳವಡಿಸಲಾಗಿದೆ. 8 ಕ್ಯಾಮರಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.ಅಗತ್ಯ ಬಿದ್ದರೆ ಅರಿವಳಿಕೆ ನೀಡಿ ಹುಲಿ ಸೆರೆ ಹಿಡಿದು ಪುನರ್ವಸತಿ ಕೇಂದ್ರಕ್ಕೆ ಬಿಡುವ ವ್ಯವಸ್ಥೆ ಮಾಡುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಶಾಸಕ ಎ.ಎಸ್‌.ಪೊನ್ನಣ್ಣ ತಿಳಿಸಿದ್ದಾರೆ ಎಂದು ಸಂಕೇತ್‌ ಪೂವಯ್ಯ ಮಾಹಿತಿ ನೀಡಿದರು.

ಪೊನ್ನಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮಾತನಾಡಿ, ಇದೀಗ ಕಾಫಿ ಕೊಯ್ಲು ಕೆಲಸದ ಋತುವಾಗಿರುವುದರಿಂದ ಹುಲಿ ಕಾಡಿಗಟ್ಟುವ ಕಾರ್ಯಾಚರಣೆ ಬೇಗ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ನಿಟ್ಟೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪೋರಂಗಡ ಪವನ್ ಇದ್ದರು.

................

ಕಾಡಿಗಟ್ಟಿದ ಹುಲಿ ಮರಳಿದ ಶಂಕೆ...ಹಲವು ತಿಂಗಳ ಹಿಂದೆ ಸುಳುಗೋಡು ಹಾಗೂ ದೇವನೂರು ವ್ಯಾಪ್ತಿಯಲ್ಲಿ ಸುಮಾರು ಏಳು ಹಸುಗಳನ್ನು ಬಲಿಪಡೆದಿದ್ದ ಹುಲಿ ಸೆರೆ ಕಾರ್ಯಾಚರಣೆ ಸಂದರ್ಭ ಹುಲಿಯ ಗುರುತು ಪತ್ತೆಗೆ ಅಳವಡಿಸಿದ್ದ ಕ್ಯಾಮರದಲ್ಲಿ ಹುಲಿಯ ಚಿತ್ರ ಸೆರೆಯಾಗಿತ್ತು. ಈ ಹುಲಿ ನಾಗರಹೊಳೆ ‘ಯು 61’ ಎಂದು ಪತ್ತೆಯಾಗಿತ್ತು. ಗಾತ್ರದಲ್ಲಿ ಸಣ್ಣದಾಗಿರುವ ಗಂಡು ಹುಲಿ ಎಂದು ಹುಲಿ ಗಣತಿಯಲ್ಲಿ ಸೆರೆಯಾದ ಹೋಲಿಕೆಯಲ್ಲಿ ದೃಢವಾಗಿತ್ತು.

ಈ ಹುಲಿಯನ್ನು ಕಳೆದ 2 ತಿಂಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಕ್ಕೆ ಅಟ್ಟಲಾಗಿತ್ತು. ಪುನಃ ಈ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಕಂಡುಬಂದಿದ್ದು, ಇದೇ ಹುಲಿ ಮತ್ತೆ ಗ್ರಾಮಕ್ಕೆ ನುಸುಳಿರಬಹುದು ಎಂಬ ಸಂಶಯ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಆದರೆ ಅರಣ್ಯ ಇಲಾಖೆ ಕಳೆದ ಎರಡು ದಿನಗಳಿಂದ ಅಳವಡಿಸಿರುವ ಕ್ಯಾಮರದಲ್ಲಿ ಹುಲಿ ಚಿತ್ರ ಸೆರೆಯಾಗಿಲ್ಲ.