ಟಿಬೇಟಿಯನ್ ಶಿಬಿರದ ಲಾಮಾ ಕ್ಯಾಂಪ್ ನಂ. ೨ರಲ್ಲಿರುವ ಡ್ರೆಪುಂಗ್ ಟಾಶಿ ಗೋಮಾಂಗ್ ಡಿಬೆಟ್ ಹಾಲ್ ಬೌದ್ಧ ಮಠದಲ್ಲಿ ನೊಬೆಲ್ ಪುರಸ್ಕೃತ ಟಿಬೇಟಿಯನ್ ಧರ್ಮ ಗುರು ದಲೈ ಲಾಮಾ ಟಿಬೇಟಿಯನ್ ಈಗ ನೆಲೆ ನಿಂತಿದ್ದು, ಟಿಬೇಟಿಯನ್ ಬಿಕ್ಕುಗಳು ಹಾಗೂ ವಿದೇಶಿಯರಿಗೆ ನಿತ್ಯ ಧರ್ಮ ಪಠಣ, ಉಪನ್ಯಾಸ, ಧಾರ್ಮಿಕ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಂತೋಷ ದೈವಜ್ಞ
ಮುಂಡಗೋಡ: ಸುತ್ತ ಪೊಲೀಸ್ ಸರ್ಪಗಾವಲಿನಿಂದ ಕೂಡಿರುವ ಇಲ್ಲಿಯ ಟಿಬೇಟಿಯನ್ ಶಿಬಿರದ ಲಾಮಾ ಕ್ಯಾಂಪ್ ನಂ. ೨ರಲ್ಲಿರುವ ಡ್ರೆಪುಂಗ್ ಟಾಶಿ ಗೋಮಾಂಗ್ ಡಿಬೆಟ್ ಹಾಲ್ ಬೌದ್ಧ ಮಠದಲ್ಲಿ ನೊಬೆಲ್ ಪುರಸ್ಕೃತ ಟಿಬೇಟಿಯನ್ ಧರ್ಮ ಗುರು ದಲೈ ಲಾಮಾ ಟಿಬೇಟಿಯನ್ ಬಿಕ್ಕುಗಳು ಹಾಗೂ ವಿದೇಶಿಯರಿಗೆ ನಿತ್ಯ ಧರ್ಮ ಪಠಣ, ಉಪನ್ಯಾಸ, ಧಾರ್ಮಿಕ ಕಾರ್ಯದಲ್ಲಿ ನಿರತರಾಗಿದ್ದಾರೆ.ಜ. 27ರ ವರೆಗೆ ದಲೈ ಲಾಮಾ ಇಲ್ಲಿಯೇ ತಂಗಲಿದ್ದು, ಸುಮಾರು 45 ದಿನ ವಿವಿಧ ಕಾರ್ಯಕ್ರಮದಲ್ಲಿ ಆಯೋಜನೆಯಾಗಿದೆ. ನಿತ್ಯ ಬಿಕ್ಕುಗಳಿಗೆ ದೀಕ್ಷೆ ನೀಡುವುದರೊಂದಿಗೆ ಧರ್ಮ ಬೋಧನೆ ಕೈಗೊಂಡಿದ್ದಾರೆ. ಮೈಸೂರು, ಧರ್ಮಶಾಲಾ, ದೆಹಲಿ, ಡೆಹರಾಡೂನ್, ಮನಾಲಿ ಮುಂತಾದ ಕಡೆಯಿಂದ ಸಹಸ್ರ ಸಂಖ್ಯೆಯಲ್ಲಿ ದಲೈ ಲಾಮಾ ಅನುಯಾಯಿಗಳು ಇಲ್ಲಿಗೆ ಆಗಮಿಸಿದ್ದು, ನಿತ್ಯ ಧರ್ಮ ಬೋಧನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಲೈ ಲಾಮಾ ತಂಗಿರುವ ಹಿನ್ನೆಲೆಯಲ್ಲಿ ಟಿಬೇಟಿಯನ್ ಕಾಲನಿ ಜನಜಂಗುಳಿಯಿಂದ ತುಂಬಿದ್ದು, ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ.
ದಲೈ ಲಾಮಾ ಅವರ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರುವ ಮಠದ ಆವರಣದಲ್ಲಿ ಸಾವಿರಾರು ಬೌದ್ದ ಸನ್ಯಾಸಿಗಳು ಜಮಾಯಿಸುತ್ತಾರೆ. ಬೆಳಗಿನಿಂದ ಸಂಜೆ ವರೆಗೂ ವಿಶೇಷ ಧಾರ್ಮಿಕ ಉಪನ್ಯಾಸ ನಡೆಯುತ್ತಿರುವುದರಿಂದ ಇಲ್ಲಿ ನೆರೆದಿರುವ ಸನ್ಯಾಸಿಗಳಿಗೆ ಹಾಗೂ ಪ್ರವಾಸಿಗರಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಟಿಬೆಟಿಯನ್ ಆಡಳಿತದ ಮೊನೆಸ್ಟ್ರಿಗಳಿಂದ ದೊಡ್ಡ ದೊಡ್ಡ ಕೊಳಾಯಿಗಳಲ್ಲಿ “ದಾಲ್” ಸಿದ್ಧಪಡಿಸಲಾಗುತ್ತದೆ. ಅದರ ಜತೆಗೆ ಗೋದಿಹಿಟ್ಟಿನ ರೊಟ್ಟಿಗಳು ಸಿದ್ಧಗೊಳ್ಳುತ್ತಿವೆ. ವಿದೇಶಿಯರು ಸೇರಿದಂತೆ ಸಾವಿರಾರು ಜನ ಇಲ್ಲಿಯ ಭೋಜನ ಸವಿಯುತ್ತಿದ್ದಾರೆ.ಪೊಲೀಸ ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ, ಎಎಸ್‌ಐ ಸೇರಿದಂತೆ ಹತ್ತಾರೂ ಅಧಿಕಾರಿಗಳು, ನೂರಾರು ಪುರುಷ ಹಾಗೂ ಮಹಿಳಾ ಕಾನ್‌ಸ್ಟೆಬಲ್‌ಗಳು, ಕೆಎಸ್‌ಆರ್‌ಪಿ ಮತ್ತು ಡಿಆರ್ ತುಕಡಿ ಸೇರಿದಂತೆ ಹಲವಾರು ಸಂಖ್ಯೆ ಪೊಲೀಸರನ್ನು ಇಲ್ಲಿ ನಿಯೋಜನೆಗೊಳಿಸಲಾಗಿದೆ. ತಪಾಸಣಾ ದಳ ಕೂಡ ಇಲ್ಲಿಯೇ ಟೆಂಟ್ ಹೂಡಿದ್ದು, ಹಗಲು ರಾತ್ರಿ ಎನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾರ್ಯನಿರತವಾಗಿವೆ. ದಲೈ ಲಾಮಾ ತಂಗಿರುವುದು ಎಕರೆ ವಿಸ್ತೀರ್ಣ ಪ್ರದೇಶದಲ್ಲಿರುವ ಮೊನೆಸ್ಟ್ರಿಯಲ್ಲಾದರೂ ಪೊಲೀಸ್ ಬಂದೋಬಸ್ತನ್ನು ೫ ಸಾವಿರ ಎಕರೆ ಭೂಪ್ರದೇಶವಿರುವ ಇಡೀ ಟಿಬೇಟಿಯನ್ ಕಾಲನಿ ಸುತ್ತ ಮಾಡಲಾಗಿದೆ. ಪೊಲೀಸರು ದಲೈ ಲಾಮಾ ಅವರ ಕಾವಲಿಗೆ ನಿಂತಿದ್ದಾರೆ. ಹೊರಗಿನವರಾರು ಟಿಬೇಟಿಯನ್ ಕಾಲನಿ ಆವರಣದೊಳಗೆ ಪ್ರವೇಶಿಸುವಂತಿಲ್ಲ. ಕೇಂದ್ರ ಹಾಗೂ ಟಿಬೇಟಿಯನ್ ಭದ್ರತಾ ಪಡೆ ಕೂಡ ಇದೆ.
ಪ್ರವಾಸಿಗರಿಗೆ ನಿರಾಸೆ: ಉತ್ತಮ ಪ್ರವಾಸಿ ತಾಣವಾಗಿರುವ ಟಿಬೇಟಿಯನ್ ಕಾಲನಿಯಲ್ಲೀಗ ದಲೈ ಲಾಮಾ ಇರುವವರೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಒಳ ಪ್ರವೇಶ ನಿಷೇಧಿಸಲಾಗಿರುವುದರಿಂದ ಪ್ರವಾಸಿಗರು ನಿರಾಶರಾಗಿ ಮರಳುವಂತಾಗಿದೆ.