ಟಿಬಿ ಡ್ಯಾಂಗೆ ಬಿಗಿ ಭದ್ರತೆ, ಪ್ರವಾಸಿಗರಿಗೆ ನಿರ್ಬಂಧ

| Published : May 09 2025, 12:30 AM IST

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ವೀಕ್ಷಣೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ಆಗಮಿಸುತ್ತಿದ್ದು ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಹಾಗೂ ಜಲಾಶಯದ ಸುರಕ್ಷತೆಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಲು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಗುರುವಾರ ಸಂಜೆಯಿಂದ ನಿರ್ಬಂಧ ಹೇರಲಾಗಿದೆ.

ಮುನಿರಾಬಾದ್:

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಪ್ರಾರಂಭವಾದ ಹಿನ್ನೆಲೆಯಲ್ಲಿ ರಾಜ್ಯದ ಅಣೆಕಟ್ಟುಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸರ್ಕಾರ ಆದೇಶದ ಹೊರಡಿಸಿದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಭಾರಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ .ಜಲಾಶಯಕ್ಕೆ ವೀಕ್ಷಣೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ಆಗಮಿಸುತ್ತಿದ್ದು ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಹಾಗೂ ಜಲಾಶಯದ ಸುರಕ್ಷತೆಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಲು ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಗುರುವಾರ ಸಂಜೆಯಿಂದ ನಿರ್ಬಂಧ ಹೇರಲಾಗಿದೆ.ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಆರ್. ಸಿದ್ದಿ ಅವರ ನಿರ್ದೇಶನದ ಮೇರೆಗೆ ತುಂಗಭದ್ರಾ ಜಲಾಶಯದ ಪ್ರವೇಶಕ್ಕೆ ಮುಖ್ಯದ್ವಾರವಾದ ಮುನಿರಾಬಾದಿನ ವಿಶ್ವೇಶ್ವರಯ್ಯ ವೃತ್ತದಲ್ಲಿ ಪೊಲೀಸ್ ಚೆಕ್‌ ಪೋಸ್ಟ್ ನಿರ್ಮಿಸಿ ಜಲಾಶಯಕ್ಕೆ ಸರ್ಪಗಾವಲು ಹಾಕಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ್ ಕನ್ನಡಪ್ರಭಕ್ಕೆ ತಿಳಿಸಿದರು.

ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಕಚೇರಿ ಹಾಗೂ ಇತರೆ ಕಚೇರಿಗಳು ಜಲಾಶಯದ ಮೇಲ್ಭಾಗದಲ್ಲಿ ಇರುವುದರಿಂದ ನೀರಾವರಿ ಇಲಾಖೆಯ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರನ್ನೂ ಜಲಾಶಯದ ಮೇಲೆ ಬಿಡದಿರಲು ನಿರ್ಧರಿಸಲಾಗಿದೆ. ಸಿಬ್ಬಂದಿಗಳು ತಮ್ಮ ಐಡೆಂಟಿಟಿ ಕಾರ್ಡ್ ತೋರಿಸಿದರೆ ಮಾತ್ರ ಅವರಿಗೆ ಪ್ರವೇಶವಿರುತ್ತದೆ. ಗುರುವಾರ ಸಂಜೆಯಿಂದಲೇ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ ಎಂದು ಸಿಪಿಐ ಸುರೇಶ ತಿಳಿಸಿದ್ದಾರೆ

ಈ ವೇಳೆ ಕಾರ್ಯ ಪಾಲಕ ಅಭಿಯಂತರದ ಗಿರೀಶ ಮೇಟಿ, ಸಹಾಯಕ ಕಾರ್ಯ ಪಾಲಕ ಯಂತ್ರ ಅಭಿಯಂತರರಾದ ಧರ್ಮರಾಜ್, ಮುನಿರಾಬಾದ್ ಪಿಎಸ್ಐ ಸುನಿಲ್ ಹಾಗೂ ಇತರರು ಉಪಸ್ಥಿತರಿದ್ದರು.