ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಟೈಂ ಫಿಕ್ಸ್‌

| Published : Aug 13 2024, 12:57 AM IST

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಟೈಂ ಫಿಕ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕ್ಕಮಗಳೂರು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಆ. 22 ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲು ಉಪ ವಿಭಾಗಾಧಿಕಾರಿ ದಲ್ಜೀತ್‌ಕುಮಾರ್‌ ನೋಟೀಸ್‌ ಜಾರಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಆ. 22 ರಂದು ಮಧ್ಯಾಹ್ನ 1 ಗಂಟೆಗೆ ನಡೆಸಲು ಉಪ ವಿಭಾಗಾಧಿಕಾರಿ ದಲ್ಜೀತ್‌ಕುಮಾರ್‌ ನೋಟೀಸ್‌ ಜಾರಿ ಮಾಡಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿದ್ದು, ಆಕಾಂಕ್ಷಿಗಳು ಆ. 12ರಿಂದಲೇ ಉಪ ವಿಭಾಗಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಬಹುದು. ಆ. 22 ರಂದು ಬೆಳಿಗ್ಗೆ 9 ರಿಂದ 11 ಗಂಟೆಯೊಳಗೆ ಉಮೇದುವಾರಿಕೆ ಸಲ್ಲಿಸಬಹುದು. ಅಂದು ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಚಿಕ್ಕಮಗಳೂರು ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಸಂಖ್ಯಾಬಲದಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಕಾಂಗ್ರೆಸ್‌ ಎರಡನೇ, ಜೆಡಿಎಸ್‌ ಹಾಗೂ ಪಕ್ಷೇತರರು ಮೂರನೇ ಸ್ಥಾನದಲ್ಲಿವೆ. ಹಾಗಾಗಿ ಈ ಬಾರಿಯೂ ಕೂಡ ಬಿಜೆಪಿ ನಗರಸಭೆ ಯಲ್ಲಿ ಅಧಿಕಾರದ ಗದ್ದುಗೆ ಏರುವುದು ಬಹುತೇಕ ಖಚಿತ.

ಚಿಕ್ಕಮಗಳೂರು ನಗರಸಭೆಯಲ್ಲಿ 18 ಮಂದಿ ಬಿಜೆಪಿ ನಗರಸಭಾ ಸದಸ್ಯರಿದ್ದಾರೆ. ಈ ಪೈಕಿ 9 ಮಹಿಳೆಯರು ಇದ್ದಾರೆ. ಇವರುಗಳಲ್ಲಿ ಹೆಚ್ಚಿನ ಮಂದಿ ಅಧ್ಯಕ್ಷರ ಆಕಾಂಕ್ಷಿಗಳೇ ಹೆಚ್ಚು. ಹಾಲಿ ಇರುವ ಮಹಿಳಾ ಸದಸ್ಯರ ಪೈಕಿ ಕೆಲವರು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಸಹ ಇದ್ದಾರೆ. ಅದ್ದರಿಂದ ಹೊಸಬರಲ್ಲಿ ಅವಕಾಶ ಸಿಗುವ ಬಗ್ಗೆ ಉತ್ಸಾಹ ಹೆಚ್ಚಾಗಿದೆ.ಅಧಿಕಾರ ಹಂಚಿಕೆ: ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆ ಏರಲು ಸ್ಪಷ್ಟ ಬಹುಮತ ಇದ್ದರೂ ಆಕಾಂಕ್ಷಿಗಳನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಕಾರ್ಯ ತಂತ್ರ ರೂಪಿಸುವಲ್ಲಿ ಎಡವಿದೆ. ಮೊದಲ ಅವಧಿಯಲ್ಲಿ ನಗರಸಭೆ ಅಧ್ಯಕ್ಷರಾಗಿದ್ದ ವರಸಿದ್ದಿ ವೇಣುಗೋಪಾಲ್‌ ಅವರ ಧೋರಣೆಯಿಂದಾಗಿ ಇತರೆ ಸದಸ್ಯರು ಅಧಿಕಾರದಿಂದ ವಂಚಿತರಾದರು.

ನಗರಸಭೆಯ ಪ್ರತಿ ಸಾಮಾನ್ಯಸಭೆಯಲ್ಲಿ ಬಿಜೆಪಿಯೇ ಮುಜುಗರಕ್ಕೆ ಒಳಗಾಗಿತ್ತು. ಬಹುಮತ ಇದ್ದರೂ ಬಿಜೆಪಿ ಸದಸ್ಯರು ಪ್ರತಿಪಕ್ಷದ ಮನಸ್ಥಿತಿಯಲ್ಲಿಯೇ ನಡೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ಸುಮಾರು ಒಂದು ವರ್ಷಗಳ ಕಾಲ ಈ ಪರಿಸ್ಥಿತಿಯಲ್ಲಿಯೇ ನಗರಸಭೆ ಆಡಳಿತ ಮುಂದುವರೆದಿತ್ತು.

ಈ ರೀತಿಯ ತಪ್ಪು ಮತ್ತೆ ಆಗಬಾರದೆಂಬ ಉದ್ದೇಶದಿಂದ ಬಿಜೆಪಿ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕಾಗಿದೆ. ನಗರಸಭೆಯ ಮಾಜಿ ಅಧ್ಯಕ್ಷರ ನಡೆ ಬಿಜೆಪಿಗೆ ಪಾಠ ಕಲಿಸಿದೆ. ಅದ್ದರಿಂದ ಹಾಲಿ ಉಳಿದಿರುವ ಅವಧಿಯಲ್ಲಿ ಪಕ್ಷದ ನಿಷ್ಟಾವಂತರಿಗೆ ಅಧಿಕಾರವನ್ನು ಹಂಚಿಕೆ ಮಾಡಲು ಬಿಜೆಪಿ ಪ್ಲಾನ್‌ ಮಾಡಿಕೊಳ್ಳುತ್ತಿದೆ.

ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದುಕೊಂಡಿದ್ದು, ಆ. 15ರ ನಂತರ ಬಿಜೆಪಿ ಕೋರ್‌ ಕಮಿಟಿ ಸಭೆಯನ್ನು ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.