ಗೋವಿಂದಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಕಾಲ

| Published : Jan 18 2024, 02:05 AM IST

ಗೋವಿಂದಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಕಾಲ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾಯಿತ ಪ್ರತಿನಿಧಿಯಾಗಿ ಲಂಚ ಕೊಟ್ಟಿದ್ದೇನೆ ಎಂದು ಹೇಳುವ ಶಾಸಕರಿಂದ ಭ್ರಷ್ಚಾಚಾರಕ್ಕೆ ಕಡಿವಾಣ ಸಾಧ್ಯವೇ ಎಂದು ಪ್ರಶ್ನಿಸಿರುವ ಬಿಜೆಪಿ ಮುಖಂಡ ಹಾಗೂ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್‌.ಲಿಂಗಮೂರ್ತಿ ಈ ಸಂಬಂಧ ಬಿ.ಜಿ.ಗೋವಿಂದಪ್ಪ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಂದರ್ಭ ಸೃಷ್ಟಿಯಾಗಿದೆ ಎಂದಿದ್ದಾರೆ.

ಹೊಸದುರ್ಗ: ಚುನಾಯಿತ ಪ್ರತಿನಿಧಿಯಾಗಿ ಲಂಚ ಕೊಟ್ಟಿದ್ದೇನೆ ಎಂದು ಹೇಳುವ ಶಾಸಕರಿಂದ ಭ್ರಷ್ಚಾಚಾರಕ್ಕೆ ಕಡಿವಾಣ ಸಾಧ್ಯವೇ ಎಂದು ಪ್ರಶ್ನಿಸಿರುವ ಬಿಜೆಪಿ ಮುಖಂಡ ಹಾಗೂ ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್‌.ಲಿಂಗಮೂರ್ತಿ ಈ ಸಂಬಂಧ ಬಿ.ಜಿ.ಗೋವಿಂದಪ್ಪ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಸಂದರ್ಭ ಸೃಷ್ಟಿಯಾಗಿದೆ ಎಂದಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪ್ತರೊಬ್ಬರ ನಿವೇಶನಕ್ಕೆ ಇ-ಸ್ವತ್ತು ಪಡೆಯಲು ಹೊಸದುರ್ಗ ಪುರಸಭೆ ಅಧ್ಯಕ್ಷರಿಗೆ 50 ಲಕ್ಷ ರು. ಲಂಚ ಕೊಡಿಸಿರುವುದಾಗಿ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿಕೆ ನೀಡಿದ್ದಾರೆ. ಕಾನೂನು ಪ್ರಕಾರ ಲಂಚ ಕೊಡುವುದು ಮತ್ತು ಪಡೆಯುವುದು ಅಪರಾಧ. ಈ ಬಗ್ಗೆ ಕಾನೂನು ಮಾತನಾಡಬೇಕಾಗುತ್ತದೆ. ಲಂಚ ಕೊಡಿಸಿರುವ ಶಾಸಕರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ಹಾಕುವಂತಹ ಸಂದರ್ಭ ಸೃಷ್ಟಿಯಾಗಿದೆ ಎಂದರು.

ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಲಂಚ ಕೊಡಿಸಿರುವುದಾಗಿ ಹೇಳಿಕೆ ನೀಡಿರುವುದು ತಾಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಶಾಸಕರೇ ಸಮರ್ಪಕ ಸಮಜಾಯಿಷಿ ನೀಡಬೇಕು. ತಾಲೂಕಿನ ಪ್ರತಿ ಇಲಾಖೆಯಲ್ಲಿ ಸಾರ್ವಜನಿಕರಿಗೆ, ರೈತರಿಗೆ ಲಂಚದ ಕಿರುಕುಳ ಆಗುತ್ತಿದೆ. ಶಾಸಕರು ಮೊದಲು ಇಂತಹ ಭ್ರಷ್ಟ ಆಡಳಿತ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂದರು.

ಬಿ.ಜಿ.ಗೋವಿಂದಪ್ಪನವರು ಮಾಜಿಯಾದ ಸಂದರ್ಭದಲ್ಲಿ ಅವರ ಸಂಬಂಧಿಕರ ಹೆಸರಲ್ಲಿ ಬ್ಯಾಂಕಿನಿಂದ 19 ಕೋಟಿ ರು ಲೋನ್ ಆಗಿತ್ತು. ಅದಕ್ಕೆ ಅಡಮಾನ ಮಾಡಲು ಉಪನೊಂದಾಣಾಧಿಕಾರಿ ಕಚೇರಿ ಸಿಬ್ಬಂದಿಗೆ 1 ಲಕ್ಷ ರು ಲಂಚ ನೀಡಿರುವುದಾಗಿ ಹೇಳಿಕೆ ನೀಡಿದ್ದಾರೆ. 19 ಕೋಟಿ ರು ಸಾಲ ಒದಗಿಸಿದ ಬ್ಯಾಂಕ್ ಯಾವುದು ? ಸಾಲ ಪಡೆಯಲು ಬ್ಯಾಂಕಿಗೆ ಸಲ್ಲಿಸಿದ ದಾಖಲೆಗಳ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ ಅವರು ಮಾಜಿ ಆಗಿದ್ದಾಗ ಲಂಚ ನೀಡಿರುವ ಬಿ.ಜಿ.ಗೋವಿಂದಪ್ಪ ಅವರಿಂದ ಭ್ರಷ್ಠಚಾರ ರಹಿತ ತಾಲೂಕು ಆಡಳಿತವನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಶಾಸಕ ಬಿ.ಜಿ.ಗೋವಿಂದಪ್ಪ ಜನಕ್ಕೆ ಮಂಕು ಬೂದಿ ಹಚ್ಚುವ ಮಾತನಾಡುವುದನ್ನು ಬಿಟ್ಟು ತಮ್ಮ ಆಡಳಿತದ ಬಗ್ಗೆ ಪರಮಾರ್ಶೆ ಮಾಡಿಕೊಳ್ಳಲಿ. ಜನಸ್ನೇಹಿ ಆಡಳಿತ ನೀಡುವ ಬಗ್ಗೆ ಕ್ರಮವಹಿಸಲಿ. ದೇವಸ್ಥಾನ, ಮನೆ ನಿರ್ಮಾಣಕ್ಕೆ ಮರಳು ಸಾಗಾಣಿಕೆ ಮಾಡುವ ಅಮಾಯಕರ ಮೇಲೆ ದೂರು ದಾಖಲಿಸುವುದ ನಿಲ್ಲಿಸಲಿ. ನಿಜವಾಗಿ ದಂಧೆ ಮಾಡುವವರಿಗೆ ಕಡಿವಾಣ ಹಾಕಲಿ ಎಂದು ಲಿಂಗಮೂರ್ತಿ ಸಲಹೆ ಮಾಡಿದ್ದಾರೆ..

ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಗದ ಅಧ್ಯಕ್ಷ ರವಿಕುಮಾರ್‌, ಮೋರ್ಚಾದ ಅಧ್ಯಕ್ಷ ಮಂಜುನಾಥ್‌, ರಮೇಶ್‌, ಮುಖಂಡ ಮಂಜುನಾಥ್‌ ಉಪಸ್ಥಿತರಿದ್ದರು.