ಸಕಾಲಿಕ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಬಹುದು: ಡಾ. ಪದ್ಮನಾಭ ಕಾಮತ್

| Published : Dec 21 2023, 01:15 AM IST

ಸಕಾಲಿಕ ಚಿಕಿತ್ಸೆಯಿಂದ ಪ್ರಾಣಾಪಾಯದಿಂದ ಪಾರಾಗಬಹುದು: ಡಾ. ಪದ್ಮನಾಭ ಕಾಮತ್
Share this Article
  • FB
  • TW
  • Linkdin
  • Email

ಸಾರಾಂಶ

ವೇಣೂರಿನಲ್ಲಿ ಭರತೇಶ ಸಮುದಾಯ ಭವನದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಪ್ರಯುಕ್ತ ಜನಮಂಗಲ ಕಾರ್ಯಕ್ರಮದಡಿ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಹೃದ್ರೋಗತಜ್ಞ ಡಾ.ಪದ್ಮನಾಭ ಕಾಮತ್‌ ಸಕಾಲಿಕ ಹೃದಯ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನಿಗದಿತವಾಗಿ ಕಾಲಕಾಲಕ್ಕೆ ಹೃದಯದ ತಪಾಸಣೆ ನಡೆಸಿ ಸಕಾಲಿಕ ಚಿಕಿತ್ಸೆ ನೀಡಿದಾಗ ಪ್ರಾಣಾಪಾಯದಿಂದ ಪಾರಾಗಬಹುದು ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಹೇಳಿದರು.ಅವರು ಭಾನುವಾರ ವೇಣೂರಿನಲ್ಲಿ ಭರತೇಶ ಸಮುದಾಯ ಭವನದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಪ್ರಯುಕ್ತ ಜನಮಂಗಲ ಕಾರ್ಯಕ್ರಮದಡಿ ಆಯೋಜಿಸಿದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಜನರು ಮಂಗಳೂರಿಗೆ ಬರಲು ವಾಹನದ ಸಮಸ್ಯೆ, ಮಾಹಿತಿಯ ಕೊರತೆ ಮೊದಲಾದ ಅನೇಕ ಸಮಸ್ಯೆಗಳಿರುತ್ತವೆ. ಆದರೂ, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಆಧುನಿಕ ಯುಗದಲ್ಲಿ ಸಕಾಲಿಕ ಚಿಕಿತ್ಸೆ ಲಭಿಸದೆ ತೊಂದರೆ ಆಗಬಾರದು ಎಂದು ಕೆ.ಎಂ.ಸಿ. ಆಸ್ಪತ್ರೆ ಅನೇಕ ಸೇವಾ ಯೋಜನೆಗಳನ್ನು ರೂಪಿಸಿದೆ. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.

ತನ್ನ ತಂದೆ ನಾರಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಹಲವು ವರ್ಷಗಳಲ್ಲಿ ಸೇವೆ ಸಲ್ಲಿಸಿರುವುದರಿಂದ ವೇಣೂರು ಪರಿಸರದ ಜನರೆಲ್ಲ ತಮ್ಮ ಕುಟುಂಬದವರಿಗೆ ಆಪ್ತರೂ, ಆತ್ಮೀಯರೂ ಆಗಿದ್ದಾರೆ ಎಂದು ಧನ್ಯತೆಯಿಂದ ಸ್ಮರಿಸಿದರು.

ವೇಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನೇಮಯ್ಯ ಕುಲಾಲ್, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಮತ್ತು ಕೆ.ಎಂ.ಸಿ. ಆಸ್ಪತ್ರೆಯ ಡಾ. ದೀಪಕ್ ಮಡಿ ಹಾಗೂ ಡಾ. ಆನಂದ ಹೆಗ್ಡೆ ಶುಭಾಶಂಸನೆ ಮಾಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು.

ಡಾ. ಶೌರ್ಯ ಬೆನರ್ಜಿ, ಡಾ. ದಿತೇಶ್, ಎಂ. ಡಾ. ಪ್ರಣೀತಾ, ಡಾ. ಶಂಕರನ್ ನಂಬೂದಿರಿ ಉಪಸ್ಥಿತರಿದ್ದರು.

ಡಾ. ಜಗದೀಶ ಚೌಟ, ಡಾ. ಶಾಂತಿಪ್ರಸಾದ್, ಡಾ. ಪೌಸ್ಟಿಲ್ ಅಜಿಲ ಮತ್ತು ಡಾ. ಆಶೀರ್ವಾದ್, ಎಂ.ಪಿ. ಶಿಬಿರದ ಆಯೋಜನೆಯಲ್ಲಿ ಸಹಕರಿಸಿದರು.

ಮಸ್ತಕಾಭಿಷೇಕ ಸಮಿತಿಯ ಪ್ರಧಾನಕಾರ್ಯದರ್ಶಿ ಪ್ರವೀಣ್‌ಕುಮಾರ್ ಇಂದ್ರ ಸ್ವಾಗತಿಸಿದರು. ಮಹಾವೀರ್ ಜೈನ್ ಮೂಡುಕೋಡಿಗುತ್ತು ವಂದಿಸಿದರು.