ಕೊಪ್ಪಳ ಜಿಲ್ಲೆಯ ಜಿಲ್ಲಾಪುರ ಸರ್ಕಾರಿ ಶಾಲೆಯಲ್ಲಿ ಸೋರುತ್ತಿದ್ದ ಕೊಠಡಿಗಳಿಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ನೆರವಿನಿಂದ ಮುಖ್ಯಾಧ್ಯಾಪಕರು ತಗಡಿನ ಹೊದಿಕೆ ಹಾಕಿಸಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ: ಸೋರುತ್ತಿರುವ ಶಾಲಾ ಕೊಠಡಿಗಳಿಗೆ ತಾಲೂಕಿನ ಜಿನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಪರಿಹಾರ ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಹಳೆಯ ವಿದ್ಯಾರ್ಥಿಗಳ ಬಳಗದ ನೆರವಿನೊಂದಿಗೆ ಅದನ್ನು ಜಾರಿ ಮಾಡಿದ್ದಾರೆ.ಹೌದು, ಸೋರುತ್ತಿರುವ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುವುದು ಕಷ್ಟವಾಗಿತ್ತು. ಕೊಠಡಿಗಳನ್ನು ದುರಸ್ತಿ ಮಾಡಿಸುವಂತೆ ಅವರಿವರ ಬಳಿ ಕೋರಿದ್ದು ಆಯಿತು. ಆದರೆ, ಅದು ಸಾಧ್ಯವಾಗದೆ ಇದ್ದಾಗ ತಾವೇ ಪರಿಹಾರ ಕಂಡುಕೊಂಡಿದ್ದಾರೆ. ಅದು ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಏನಿದು ಪರಿಹಾರ?: ಶಾಲಾ ಕೊಠಡಿಗಳು ಸೋರುತ್ತಿರುವುದು ಕೇವಲ ಜಿನ್ನಾಪುರ ಗ್ರಾಮದಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಇಂತಹ ಸಮಸ್ಯೆಯಿದೆ. ಮಳೆಗಾಲ ಬಂದರೆ ಪಾಠ ಮಾಡುವುದೇ ದುಸ್ತರವಾಗುತ್ತದೆ. ಕೆಲವೊಂದು ಶಾಲೆಯಲ್ಲಿ ಮಳೆ ಬಂದರೆ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗುತ್ತದೆ. ಜಿನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಇದೇ ಸಮಸ್ಯೆ ಇತ್ತು.ಈಗ ಮುಖ್ಯಾಧ್ಯಾಪಕರು ಸೋರುತ್ತಿರುವ ಶಾಲಾ ಕೊಠಡಿಗಳಿಗೆ ತಗಡಿನ ಹೊದಿಗೆ ಹಾಕಿಸಿದ್ದಾರೆ. ಸೋರುವ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಜಿನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳು ಕೊಠಡಿಗಳಿದ್ದವು. ಅದರಲ್ಲಿ ಎರಡನ್ನು ನೆಲಸಮ ಮಾಡಲಾಗುತ್ತಿದೆ. ಇನ್ನೊಂದು ಕೊಠಡಿ ಎರಡು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸೋರಿಕೆ ಸಮಸ್ಯೆ ಇಲ್ಲ. ಉಳಿದ ನಾಲ್ಕು ಕೊಠಡಿಗಳು ಸೋರುತ್ತಿರುವುದರಿಂದ ಮಳೆಗಾಲದಲ್ಲಿ ಪಾಠ ಮಾಡಲು ಆಗುತ್ತಿರಲಿಲ್ಲ. ಒಂದು ದಿನ ಮಳೆಯಾದರೆ ನಾಲ್ಕು ದಿನಗಳ ಕಾಲ ಸೋರುತ್ತಿದ್ದವು. ಹೀಗಾಗಿ, ಆ ನಾಲ್ಕು ಕೊಠಡಿಗಳಿಗೆ ತಗಡಿನ ಹೊದಿಕೆ ಹಾಕಿಸಿದ್ದಾರೆ.
ಪ್ರತಿ ಕೊಠಡಿಗೆ ₹50 ಸಾವಿರದಂತೆ ನಾಲ್ಕು ಕೊಠಡಿಗಳಿಗೆ ₹2 ಲಕ್ಷ ವೆಚ್ಚ ಮಾಡಲಾಗಿದೆ. ಸರ್ಕಾರದಿಂದ ನಯಾಪೈಸೆ ಕೇಳಿಲ್ಲ. ಎಸ್.ಡಿ.ಎಂ.ಸಿ. ಅಧ್ಯಕ್ಷ ಅಪ್ಪಣ್ಣ ಮಾಲಿಪಾಟೀಲ್ ಅವರ ಸಹಕಾರದೊಂದಿಗೆ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ₹1.75 ಲಕ್ಷ ಸಂಗ್ರಹಿಸಲಾಗಿದೆ. ಉಳಿದ ₹25 ಸಾವಿರವನ್ನು ಮುಖ್ಯಾಧ್ಯಾಪಕರೇ ದೇಣಿಗೆ ನೀಡಿದ್ದಾರೆ.ಹೇಗೆ ಬಂತು ಉಪಾಯ?: ಶಾಲೆಯ ಮುಖ್ಯೋಪಾಧ್ಯಾಯ ಚನ್ನಬಸಯ್ಯ ಅವರು ಮಲೆನಾಡು ಮೂಲದವರು. ತಮ್ಮೂರ ಕಡೆ ಮನೆಗಳಿಗೆ ತಗಡಿನ ಹೊದಿಕೆ ಹಾಕುವುದನ್ನು ಗಮನಿಸಿದ್ದ ಅವರು, ಅದನ್ನೇ ಇಲ್ಲಿ ಶಾಲಾ ಕೊಠಡಿಗಳಿಗೆ ಪ್ರಯೋಗ ಮಾಡಿದ್ದಾರೆ.
ಶಾಲಾ ಕೊಠಡಿಗಳು ಸೋರುತ್ತಿರುವುದರಿಂದ ಪಾಠ ಮಾಡುವುದು ಸಮಸ್ಯೆಯಾಗಿತ್ತು. ಹೀಗಾಗಿ, ಹಳೆಯ ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರಿಂದ ದೇಣಿಗೆ ಪಡೆದು, ತಗಡಿನ ಹೊದಿಕೆ ಹಾಕಿಸಿದ್ದು, ಸೋರುವ ಪ್ರಶ್ನೆಯೇ ಬರುವುದಿಲ್ಲ ಎಂದು ಮುಖ್ಯೋಪಾಧ್ಯಾಯ ಚನ್ನಬಸಯ್ಯ ಗಂಟಾಮಠ ಹೇಳಿದರು.ಶಾಲಾ ಕೊಠಡಿಗಳು ಸೋರುತ್ತಿರುವುದರಿಂದ ಮಳೆಗಾಲದಲ್ಲಿ ಮಕ್ಕಳಿಗೆ ಪಾಠ ಮಾಡುವುದೇ ದುಸ್ತರವಾಗಿತ್ತು. ಹೊಸ ಕಟ್ಟಡಗಳ ನಿರ್ಮಾಣವೂ ಕಷ್ಟವಾಗಿತ್ತು. ಹೀಗಾಗಿ, ಮುಖ್ಯೋಪಾಧ್ಯಾಯರ ಮಾರ್ಗದರ್ಶನದಂತೆ ತಗಡಿನ ಹೊದಿಕೆ ಹಾಕಿಸಲಾಗಿದ್ದು, ಅನುಕೂಲವಾಗಲಿದೆ ಎಂದು ಜಿನ್ನಾಪುರ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಅಪ್ಪಣ್ಣ ಮಾಲಿಪಾಟೀಲ್ ಹೇಳಿದರು.