ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ಸಾಕಪ್ಪ ಸಾಕು. ಈ ಚುನಾವಣೆ ಡ್ಯೂಟಿ. ತಗಡಿನ ಶೆಡ್, ಬಿಸಿ ನೀರು ಸೇವನೆ.., ಬಿಸಿ ಕುಕ್ಕರ್‌ನ್ಯಾಗ ಕುಂತಂಗ ಆಗೈತಿ ನೋಡ್ರಿ.!
ಇದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಮಾತು.ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಬೇರೆ ಊರುಗಳಿಂದ ಅಕ್ರಮ ಹಣ, ಸೀರೆ, ಫ್ಯಾನ್ ಸೇರಿದಂತೆ ಮತ್ತಿತರ ವಸ್ತುಗಳು ಬರಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗದ ನಿರ್ದೇಶನದ ಮೇಲೆ ನಗರ ಹಾಗೂ ಪಟ್ಟಣಗಳ ಪ್ರವೇಶದ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳು ಅಕ್ಷರಶಃ ಅಗ್ನಿಕುಂಡಗಳಾಗಿವೆ.
ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 24 ಚೆಕ್‌ಪೋಸ್ಟ್ ತೆರೆಯಲಾಗಿದೆ. ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಎಂಟು ಗಂಟೆಗೊಮ್ಮೆ ಶಿಫ್ಟ್ ಬದಲಾಗುತ್ತದೆ. ಪ್ರತಿ ಪಾಳಿಯಲ್ಲೇ ಮೂವರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ. ಅಂದರೆ ಪ್ರತಿದಿನ 216 ಜನ ಕೆಲಸ ನಿರ್ವಹಿಸುತ್ತಾರೆ. ಬರುವ ಕಾರು ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ತಪಾಸಣೆ ಮಾಡುವುದು ಇವರ ಕೆಲಸ.ಎಲ್ಲ ಚೆಕ್‌ಪೋಸ್ಟ್‌ಗಳು ತಗಡಿನ ಶೆಡ್ ಆಗಿವೆ. ಏರುತ್ತಿರುವ ಬಿಸಿಲಿನ ದಗೆಯಿಂದ ತತ್ತರಿಸುವಂತಾಗಿದೆ. ಶೆಡ್‌ನಲ್ಲಿ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆಯೇನೋ ಮಾಡಲಾಗಿದೆ. ಕುಡಿಯುವ ನೀರಿನ ಕ್ಯಾನ್ ಇಡಲಾಗಿದೆ. ಆದರೆ ಏರುಗತಿಯಲ್ಲಿರುವ ಬಿಸಿಲಿನಿಂದ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಹೊರಗೆ ಹೋಗಿ ನಿಲ್ಲಲು ಆಗದಂತಹ ಪರಿಸ್ಥಿತಿ.
ಬಿಸಿಲಿನ ದಗೆ ಜಾಸ್ತಿಯಾಗಿದೆ ಎಂದು ನೀರು ಕುಡಿಯಬೇಕೆಂದರೆ ಅದು ಕೂಡ ಬಿಸಿಯಾಗಿರುತ್ತದೆ. ತಣ್ಣೀರನ್ನು ಇಟ್ಟು ಒಂದೇ ಗಂಟೆಯೊಳಗೆ ಬಿಸಿಯಾಗಿರುತ್ತದೆ. ಹೀಗಾಗಿ ಬಿಸಿನೀರು ಕುಡಿಯುವ ಅನುಭವ ಸಿಬ್ಬಂದಿಗೆ. ಶೆಡ್‌ನಲ್ಲಿ ಕುಳಿತುಕೊಳ್ಳುವುದು ಎಂದರೆ ಕುಕ್ಕರ್‌ನಲ್ಲಿ ಕುಳಿತ ಅನುಭವ. ಸಂಜೆ ನಂತರ ಸೊಳ್ಳೆಕಾಟ. ಸೊಳ್ಳೆ ಕಚ್ಚಿಸಿಕೊಳ್ಳುತ್ತಲೇ ರಾತ್ರಿಯೆಲ್ಲ ಕಳೆಯಬೇಕಿದೆ.ಫ್ಯಾನಿನ ವ್ಯವಸ್ಥೆಯಾದರೂ ಮಾಡಿ:
ಚುನಾವಣೆ ಕೆಲಸ ಮಾಡಲು ನಮಗೇನೂ ತೊಂದರೆ ಇಲ್ಲ. ಆದರೆ ಬಿಸಿಲಿನ ತಾಪ ಜಾಸ್ತಿ ಇದೆ. ಅದಕ್ಕಾಗಿ ಪ್ರತಿ ಶೆಡ್‌ನಲ್ಲಿ ಫ್ಯಾನ್‌ನ ವ್ಯವಸ್ಥೆಯನ್ನಾದರೂ ಮಾಡಬೇಕು. ಇನ್ನು ಈಗಾಗಲೇ ನಾವು 20 ದಿನಗಳಿಂದಲೂ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಮಾಡುತ್ತಿದ್ದೇವೆ. ನಮಗೆ ಚುನಾವಣೆಯದ್ದೇ ಬೇರೆ ಕೆಲಸ ನೀಡಲಿ. ಇಷ್ಟು ದಿನ ಚುನಾವಣೆಯ ಬೇರೆ ಬೇರೆ ಕೆಲಸದಲ್ಲಿ ನಿರತರಾಗಿರುವವರಿಗೂ ಇಲ್ಲಿ ನಿಯೋಜಿಸಲಿ. ಪ್ರತಿದಿನ ಬಿಸಿಲಿನ ದಗೆ ಅನುಭವಿಸುವುದು ಎಂದರೆ ಸಾಮಾನ್ಯನಾ? ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ಗಮನ ಹರಿಸಲಿ ಎಂಬ ಬೇಡಿಕೆ ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿಗಳದ್ದು.ಒಟ್ಟಿನಲ್ಲಿ ಚೆಕ್‌ಪೋಸ್ಟ್‌ನಲ್ಲಿರುವ ಸಿಬ್ಬಂದಿ ಮಾತ್ರ ಬಿಸಿಲಿನ ದಗೆಯಿಂದ ತತ್ತರಿಸುವುದಂತೂ ಸತ್ಯ. ಇನ್ನಾದರೂ ಜಿಲ್ಲಾ ಚುನಾವಣಾಧಿಕಾರಿಗಳು ಇವರತ್ತ ಗಮನ ಹರಿಸಬೇಕಿದೆ. ಫ್ಯಾನ್ ಸೇರಿದಂತೆ ಮತ್ತಿತರರ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಸಿಬ್ಬಂದಿಗಳದ್ದು.
ಬಿಸಿಲಿನ ತಾಪದಿಂದ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತೊಂದರೆ ಅನುಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಒಂದೆರಡು ದಿನಗಳಲ್ಲಿ ಫ್ಯಾನ್ ಅಳವಡಿಸಲಾಗುವುದು. ಇದಲ್ಲದೇ ಏನೇನು ಅಗತ್ಯವೋ ಆ ಸೌಲಭ್ಯಗಳನ್ನೆಲ್ಲ ಕಲ್ಪಿಸಲಾಗುವುದು. ಯಾವುದೇ ಬಗೆಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.