ಬಿಜೆಪಿ ತೆಕ್ಕೆಯಲ್ಲಿದ್ದ ತಿಪಟೂರು ನಗರಸಭೆ ಕಾಂಗ್ರೆಸ್ ಪಾಲು

| Published : Aug 27 2024, 01:35 AM IST

ಬಿಜೆಪಿ ತೆಕ್ಕೆಯಲ್ಲಿದ್ದ ತಿಪಟೂರು ನಗರಸಭೆ ಕಾಂಗ್ರೆಸ್ ಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ್ದ ತಿಪಟೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಮುನಾ ಧರಣೇಶ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮೇಘನಾ ಸುಜಿತ್ ಭೂಷಣ್ ಆಯ್ಕೆಯಾಗುವ ಮೂಲಕ ಬಿಜೆಪಿ ತೆಕ್ಕೆಯಲ್ಲಿದ್ದ ನಗರಸಭೆಯ ಅಧಿಕಾರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತು.

ತಿಪಟೂರು: ತೀವ್ರ ಕುತೂಹಲ ಕೆರಳಿಸಿದ್ದ ತಿಪಟೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಮುನಾ ಧರಣೇಶ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮೇಘನಾ ಸುಜಿತ್ ಭೂಷಣ್ ಆಯ್ಕೆಯಾಗುವ ಮೂಲಕ ಬಿಜೆಪಿ ತೆಕ್ಕೆಯಲ್ಲಿದ್ದ ನಗರಸಭೆಯ ಅಧಿಕಾರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತು.

ಮೀಸಲಾತಿ ಪ್ರಕಟಗೊಳ್ಳಲು ತಡವಾದ ಕಾರಣ ಕಳೆದ ಒಂದು ವರ್ಷದಿಂದ ತಿಪಟೂರು ನಗರಸಭೆಗೆ ಅಧ್ಯಕ್ಷರಿಲ್ಲದೇ ಅಧಿಕಾರಿಗಳೇ ಆಡಳಿತ ನಡೆಸುವಂತಾಗಿತ್ತು. ಈಗ ನಿಗಧಿಪಡಿಸಿದ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ದೊರೆತಿದ್ದು ಎರಡೂ ಸ್ಥಾನಗಳು ಆಡಳಿತ ಪಕ್ಷದ ಕಾಂಗ್ರೆಸ್ ಪಾಲಾಗಿವೆ.

ಪಕ್ಷವಾರು ಮತ ಗಳಿಕೆ: ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಮುನಾ ಧರಣೇಶ್ 18 ಮತಗಳನ್ನು ಗಳಿಸಿ ಆಯ್ಕೆಯಾದರೆ ಪ್ರತಿಸ್ಪರ್ಧಿ ಬಿಜೆಪಿಯ ಲತಾ ಲೋಕೇಶ್ 15 ಮತಗಳಿಸಿ ಸೋಲು ಕಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೇಘಾ ಸುಜಿತ್ 18 ಮತಗಳನ್ನು ಪಡೆದು ಆಯ್ಕೆಯಾದರೆ ಪ್ರತಿಸ್ಪರ್ಧಿ ಬಿಜೆಪಿಯ ಸಂಗಮೇಶ್ 15 ಮತಗಳನ್ನು ಪಡೆದು ಸೋಲು ಅನುಭವಿಸಬೇಕಾಯಿತು.

ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ ಚುನಾವಣೆಯಲ್ಲಿ ಭಾಗವಹಿಸಿ ಪಕ್ಷದ ಪರವಾಗಿ ಮತಚಲಾಯಿಸಿದರೆ, ಕೇಂದ್ರ ಸಚಿವರಾದ ವಿ. ಸೋಮಣ್ಣ ಸಹ ಚುನಾವಣೆಯಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಕಾರ್ಯನಿರ್ವಹಿಸಿದರು.

31 ನಗರಸಭೆ ಸದಸ್ಯರು, ಶಾಸಕರು ಹಾಗೂ ಸಂಸದರೂ ಸೇರಿ 33 ಸದಸ್ಯ ಬಲ ಹೊಂದಿದ್ದ ತಿಪಟೂರು ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಅಗತ್ಯವಿದ್ದ 17 ಸದಸ್ಯರ ಸಂಖ್ಯೆ ಇರಲಿಲ್ಲ. ಆದ್ದರಿಂದ 6 ಪಕ್ಷೇತರ ಸದಸ್ಯರು ಹಾಗೂ 4 ಜೆಡಿಎಸ್ ಸದಸ್ಯರ ಮತಗಳ ಮೇಲೆ ಕಣ್ಣಿಟ್ಟಿತ್ತು. ಸಂಸದರೂ ಸೇರಿ ಬಿಜೆಪಿಯ 13 ಸದಸ್ಯರು ಹಾಗೂ ಶಾಸಕರೂ ಸೇರಿ ಕಾಂಗ್ರೆಸ್‌ನ 10 ಸದಸ್ಯರಿದ್ದರೂ ಉಳಿದ ಸದಸ್ಯರ ಬೆಂಬಲಕ್ಕಾಗಿ ವ್ಯೂಹ ಹೆಣೆದಿದ್ದರೂ ಕೊನೆಗೆ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾದವು.