ಗುಂಡ್ಲುಪೇಟೆಯಲ್ಲಿ ಬೈಕ್‌ಗೆ ಟಿಪ್ಪರ್‌ ಡಿಕ್ಕಿ: ಸವಾರನ ಕಾಲು ತುಂಡು

| Published : Dec 05 2024, 12:35 AM IST

ಸಾರಾಂಶ

ಇಲ್ಲಿ ಕಳೆದೆರಡು ತಿಂಗಳ ಹಿಂದೆ ಟಿಪ್ಪರ್‌ ಹರಿದು ಮೂವರು ಕೇರಳಿಗರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಗುಂಡ್ಲುಪೇಟೆ ಪಟ್ಟಣದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಕಾಲು ತುಂಡಾದ ಘಟನೆ ಬುಧವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿ ಕಳೆದೆರಡು ತಿಂಗಳ ಹಿಂದೆ ಟಿಪ್ಪರ್‌ ಹರಿದು ಮೂವರು ಕೇರಳಿಗರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಪಟ್ಟಣದಲ್ಲಿ ಟಿಪ್ಪರ್‌ ಹರಿದು ಬೈಕ್‌ ಸವಾರ ಕಾಲು ತುಂಡಾದ ಘಟನೆ ಬುಧವಾರ ನಡೆದಿದೆ.ಟಿಪ್ಪರ್‌ ಹಾವಳಿ, ಮಿತಿ ಮೀರಿದ ವೇಗ, ಓವರ್‌ ಲೋಡ್‌ ತುಂಬಿ ಸಾಗುವ ಟಿಪ್ಪರ್‌ ಮೇಲೆ ಕ್ರಮಕ್ಕೆ ಮುಂದಾಗದ ಪೊಲೀಸ್‌, ಆರ್‌ಟಿಒ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಏನಿದು ಘಟನೆ?:

ಕೇರಳ ಮೂಲದ ಜಾಸ್ಮೀನ್‌ (೩೫) ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿ ವಾಪಸ್‌ ಊಟಿ ಸರ್ಕಲ್‌ ಬಳಿ ಬೈಕ್‌ನಲ್ಲಿ ಬರುವಾಗ ಹಿಂಬದಿ ಬಂದ ಟಿಪ್ಪರ್‌ ಗುದ್ದಿದೆ. ಈ ರಭಸಕ್ಕೆ ಬೈಕ್‌ ಸವಾರ ಕೆಲ ಮೀಟರ್ ದೂರ ಹೋಗಿ ಬಿದ್ದಿದ್ದು, ಎಡಗಾಲು ಮುರಿದಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿದೆ. ಟಿಪ್ಪರ್‌ ಅಪಘಾತ ಮಾಡಿದ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸರು ಟಿಪ್ಪರ್‌ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.ಕರ್ತವ್ಯ ಲೋಪ:

ಪಟ್ಟಣದಲ್ಲಿ ಆಗಾಗ್ಗೆ ಟಿಪ್ಪರ್‌ ಹಾವಳಿಗೆ ಅಪಘಾತ ನಡೆದು ಸಾವು, ನೋವುಗಳು ನಡೆಯುತ್ತಿವೆ. ಟಿಪ್ಪರ್‌ ಹಾವಳಿಗೆ ಬ್ರೇಕ್‌ ಕಾಲು ಪೊಲೀಸ್‌, ಆರ್‌ಟಿಒ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.ಪಟ್ಟಣ ಸೇರಿ ತಾಲೂಕಿನಲ್ಲಿ ಟಿಪ್ಪರ್‌ ಹಾವಳಿ ಮಿತಿ ಮೀರಿದ್ದು, ಪಟ್ಟಣ, ಬೇಗೂರು, ತೆರಕಣಾಂಬಿಯಲ್ಲಿ ಶಾಲಾ, ಕಾಲೇಜು ಆರಂಭ ಹಾಗೂ ಬಿಡುವ ವೇಳೆ ಟಿಪ್ಪರ್‌ ಸಂಚಾರ ನಿಷೇಧಿಸಲು ಶಾಸಕರು ಪೊಲೀಸರಿಗೆ ಸೂಚನೆ ನೀಡಬೇಕು.