ಟಿಪ್ಪರ್‌ ಡಿಕ್ಕಿ: ಬಸ್ಸಿನಿಂದ ಹೊರಗೆ ಬಿದ್ದ ಮಹಿಳೆ

| Published : Oct 16 2024, 12:34 AM IST

ಸಾರಾಂಶ

ಕೆಎಸ್ಆರ್ ಟಿಸಿ ಬಸ್ ನಲ್ಲಿ ಬೆಂಗಳೂರಿನಿಂದ ಪೆರೇಸಂದ್ರಕ್ಕೆ ಬಂದ ಮಹಿಳೆ ಇನ್ನೇನು ಬಸ್ಸಿನಿಂದ ಇಳಿಯಬೇಕು ಎನ್ನುವಷ್ಟರಲ್ಲಿ ವೇಗವಾಗಿ ಬಂದ ಟಿಪ್ಪರ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮಹಿಳೆ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಮಹಿಳೆಯನ್ನು ಪೆರೇಸಂದ್ರದ ಲೀಲಾವತಿ ಎಂದು ಗುರುತಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿ ರಾಷ್ಟ್ರೀಯ ಹೆದ್ದಾರಿ 44ರ ಪೆರೇಸಂದ್ರ ಮೇಲ್ಸೇತುವೆ ಮೇಲೆ ಬೆಂಗಳೂರಿನಿಂದ ಬಾಗೇಪಲ್ಲಿಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಬಸ್ಸಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿನಿಂದ ಹೊರಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.ಕೆಎಸ್ಆರ್ ಟಿಸಿ ಬಸ್ ನಲ್ಲಿ ಬೆಂಗಳೂರಿನಿಂದ ಪೆರೇಸಂದ್ರಕ್ಕೆ ಬಂದ ಮಹಿಳೆ ಇನ್ನೇನು ಬಸ್ಸಿನಿಂದ ಇಳಿಯಬೇಕು ಎನ್ನುವಷ್ಟರಲ್ಲಿ ವೇಗವಾಗಿ ಬಂದ ಟಿಪ್ಪರ್ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮಹಿಳೆ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಮಹಿಳೆಯನ್ನು ಪೆರೇಸಂದ್ರದ ಲೀಲಾವತಿ ಎಂದು ಗುರುತಿಸಲಾಗಿದೆ. ಈ ಎಲ್ಲ ದೃಶ್ಯಗಳು ಮೇಲ್ಸೇತುವೆ ಮೇಲೆ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.ಬಸ್‌ಗೆ ಗುದ್ದಿಗ ಟಿಪ್ಪರ್‌

ಬಸ್ಸು ಚಿಕ್ಕಬಳ್ಳಾಪುರಕ್ಕೆ ಬಂದಾಗ ಅದರಲ್ಲಿದ್ದ ಪ್ರಯಾಣಿಕರೆಲ್ಲಾ ಇಳಿದಿದ್ದು, ಬಸ್ಸಿನಲ್ಲಿ ಡ್ರೈವರ್‌, ಕಂಡಕ್ಟರ್ ಮತ್ತು ಮಹಿಳೆ ಮಾತ್ರ ಇದ್ದರು ಎನ್ನಲಾಗಿದೆ. ಲೀಲಾವತಿ ಕೂಡ ಇನ್ನೇನು ತನ್ನ ಗ್ರಾಮ ಪೇರೆಸಂದ್ರ ಬಂತು ಎಂದು ತನ್ನ ಬಳಿ ಇದ್ದ ಲಗೇಜ್ ಕೈಲಿಡಿದು ಇಳಿಯಲು ಸಿದ್ದವಾಗಿ ಡೋರ್ ಬಳಿ ನಿಂತಿದ್ದಳು . ಬಸ್ ಪೇರೆಸಂದ್ರ ಕ್ರಾಸ್‌ನಲ್ಲಿ ನಿಂತಿದೆ. ಆಗ ಟಿಪ್ಪರ್ ಲಾರಿ ಬಸ್‌ಗೆ ಗುದ್ದಿದಾಗ ಬಸ್ಸಿನ ಬಾಗಿಲ ಬಳಿ ನಿಂತಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ.ರಸ್ತೆ ಮಧ್ಯೆ ಬಸ್‌ ನಿಲುಗಡೆ

ಆದರೆ ಬಸ್ ಅನ್ನು ಚಾಲಕ ರಸ್ತೆಯ ಮಧ್ಯೆದಲ್ಲಿ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೆರೇಸಂದ್ರ ಪೊಲೀಸರು ಟಿಪ್ಪರ್ ಲಾರಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.