ಟಿಪ್ಪರ್‌ ನಿಲ್ಸಲ್ಲ, ಹೋಂ ಗಾರ್ಡ್‌ ತಡೆಯಲ್ಲ

| Published : Oct 28 2024, 12:49 AM IST / Updated: Oct 28 2024, 12:50 AM IST

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಖನಿಜ ತನಿಖಾ ಠಾಣೆಯ ಮುಂದೆ ಹೋಂ ಗಾರ್ಡ್‌ ಸಿಬ್ಬಂದಿ ನಿಂತಿದ್ದರೂ ಟಿಪ್ಪರ್‌ ನಿಲ್ಲಿಸದೆ ತೆರಳುವ ದೃಶ್ಯ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೈಸೂರು-ಊಟಿ ಹೆದ್ದಾರಿಯಲ್ಲಿರುವ ಈ ಹಿರೀಕಾಟಿ ಖನಿಜ ತನಿಖಾ ಠಾಣೆಯಲ್ಲಿ ಹೋಂ ಗಾರ್ಡ್‌ಗಳೇ ತಪಾಸಣಾ ಅಧಿಕಾರಿಯಾಗಿದ್ದಾರೆ!

ಹೋಂ ಗಾರ್ಡ್‌ ಖನಿಜ ತನಿಖಾ ಠಾಣೆ ಮುಂದೆ ನಿಂತಿದ್ದರೂ ಟಿಪ್ಪರ್‌ಗಳು ಎಂಡಿಪಿ ಹಾಗೂ ರಾಯಲ್ಟಿ ಚೀಟಿ ತೋರಿಸದೆ ತೆರಳುತ್ತವೆ. ಒಂದು ವೇಳೆ ಹೋಂ ಗಾರ್ಡ್‌ ಟಿಪ್ಪರ್‌ ತಡೆದರೂ ಬಹುತೇಕ ಟಿಪ್ಪರ್‌ಗಳು ನಿಲ್ಲಿಸುತ್ತಿಲ್ಲ. ಹಿರೀಕಾಟಿ ಭಾಗದ ಕ್ರಷರ್‌ಗೆ ಸೇರಿದ ಟಿಪ್ಪರ್‌ಗಳು ಎಕ್ಸ್‌ಪ್ರೆಸ್‌ ಸಾರಿಗೆ ಬಸ್‌ನಂತೆ ವೇಗವಾಗಿ ತೆರಳುತ್ತಿವೆ. ತಾಲೂಕಿನಲ್ಲಿ ಕ್ವಾರಿ, ಕ್ರಷರ್‌ಗಳಿಗೇನು ಬರವಿಲ್ಲ. ಅದು ಬೇಗೂರು ಹೋಬಳಿಯಂತೂ ಕ್ವಾರಿಗಳು, ಕ್ರಷರ್‌ಗಳ ತಾಣವಾಗಿದ್ದು, ಕ್ವಾರಿಯ ರಾ ಮೆಟಿರಿಯಲ್‌, ಕ್ರಷರ್‌ನ ಉತ್ಪನ್ನಗಳು ತೋರಿಕೆ ಪರ್ಮಿಟ್‌ ಹಾಕಿ ನಾಲ್ಕೈದು ಟ್ರಿಪ್‌ ಕಲ್ಲು ಅಕ್ರಮವಾಗಿ ಕ್ರಷರ್‌ ಬಾಯಿಗೆ ಹೋಗುತ್ತಿದೆ.

ಇನ್ನೂ ಕ್ರಷರ್‌ ಉತ್ಪನ್ನಗಳಂತೂ ಹಗಲು ರಾತ್ರಿ ಎನ್ನದೆ ಓವರ್‌ ಲೋಡ್‌ ತುಂಬಿದ ಟಿಪ್ಪರ್‌ಗಳು ಮೈಸೂರು ಕಡೆಯತ್ತ ರಾಜಾರೋಷವಾಗಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಕಾಣದಂತೆ ಕುಳಿತಿದೆ ಎಂದು ಹಿರೀಕಾಟಿ ಗ್ರಾಮದ ಪ್ರಸನ್ನ ದೂರಿದ್ದಾರೆ.

ಕೆಲ ಕ್ರಷರ್‌ ಮಾಲೀಕರ ಆಮಿಷಕ್ಕೆ ಖನಿಜ ತನಿಖಾ ಠಾಣೆಯಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರೀಕಾಟಿ ಬಳಿಯ ಕ್ರಷರ್‌ನ ಟಿಪ್ಪರ್‌ಗಳಿಗೆ ತಡೆಯೋದೇ ಇಲ್ಲ!. ಅಲ್ಲದೆ ಹಿರೀಕಾಟಿ ಕ್ವಾರಿಯಿಂದ ತರಲು ಬೋಡ್ರೆಸ್‌ ಕಲ್ಲಿನಲ್ಲಿ ಶೇ.90 ರಷ್ಟು ಕಲ್ಲು ರಾಯಲ್ಟಿ ಇಲ್ಲದೆ ಕ್ರಷರ್‌ ಬಾಯಿಗೆ ಹೋಗುತ್ತಿದೆ. ಲಕ್ಷಗಟ್ಟಲೇ ಟನ್‌ ಕಲ್ಲು ರಾಜಧನ ವಂಚಿಸುತ್ತಿದ್ದಾರೆ ಎಂಬ ಆರೋಪವಿದೆ.