ಟಿಪ್ಪರ್‌, ಕ್ರೂಸರ್‌, ಲಾರಿ ಡಿಕ್ಕಿ: ಏಳು ಸಾವು

| Published : Oct 10 2023, 01:00 AM IST

ಟಿಪ್ಪರ್‌, ಕ್ರೂಸರ್‌, ಲಾರಿ ಡಿಕ್ಕಿ: ಏಳು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಾಸನಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಸೋಮವಾರ ಎರಡು ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ ನಗರದ ಹೊರವಲಯದ ವ್ಯಾಸನಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ- 50ರಲ್ಲಿ ಸೋಮವಾರ ಎರಡು ಲಾರಿ ಮತ್ತು ಕ್ರೂಸರ್‌ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸಪೇಟೆಯ ಉಕ್ಕಡಕೇರಿ ನಿವಾಸಿಗಳಾದ ಕೆಂಚವ್ವ (80), ಅವರ ಸಹೋದರ ಬಸಾಪುರ ಗೋಣಿಬಸಪ್ಪ (65), ಭಾಗ್ಯಮ್ಮ (32) ಮತ್ತು ಬಾಲಕ ಯುವರಾಜ (5) ಮತ್ತು ಸಂಡೂರಿನ ನಿವಾಸಿಗಳಾದ ಭೀಮಲಿಂಗಪ್ಪ (62), ಉಮಾ (55) ಮತ್ತು ಅನಿಲ್‌ (26) ಮೃತಪಟ್ಟಿದ್ದಾರೆ. ಕ್ರೂಸರ್‌ ವಾಹನದಲ್ಲಿದ್ದ ಬಾಲಕ ವಿವಾನ್‌ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಟಿಪ್ಪರ್ ಚಾಲಕ ಮತ್ತು ಇನ್ನೊಂದು ಲಾರಿ ಚಾಲಕ ಕೂಡ ಗಾಯಗೊಂಡಿದ್ದಾರೆ. ಘಟನೆ ವಿವರ: ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಕೆಂಚವ್ವ ಅವರ ಮೊಮ್ಮಕ್ಕಳ ಜವಳಕ್ಕಾಗಿ ತೆರಳಿದ್ದರು. ಜವಳ ಕಾರ್ಯ ಮುಗಿಸಿಕೊಂಡು ನಗರಕ್ಕೆ ವಾಪಸ್‌ ಆಗುತ್ತಿದ್ದಾಗ ವ್ಯಾಸನಕೇರಿ ಗ್ರಾಮದ ಬಳಿ ಟಿಪ್ಪರ್‌ ಎಕ್ಸಲ್‌ ತುಂಡಾಗಿ ನಿಯಂತ್ರಣ ತಪ್ಪಿ, ಡಿವೈಡರ್‌ ದಾಟಿ, ರಾಷ್ಟ್ರೀಯ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಕ್ರೂಸರ್‌ ಮತ್ತು ಲಾರಿಗೆ ಡಿಕ್ಕಿ ಹೊಡೆದಿದೆ. ಕ್ರೂಸರ್‌ ಅಪ್ಪಚ್ಚಿಯಾಗಿದ್ದು, ಇನ್ನೊಂದು ಲಾರಿ ಕಂದಕಕ್ಕೆ ಉರುಳಿ ಬಿದ್ದಿದೆ. ಭೀಕರ ಅಪಘಾತದಿಂದ ಕ್ರೂಸರ್‌ ವಾಹನ ಅಪ್ಪಚ್ಚಿಯಾಗಿದ್ದು, ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು. ಮೃತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಐಜಿಪಿ ಲೋಕೇಶ್‌ ಕುಮಾರ, ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿ ಪರಿಶೀಲಿಸಿದರು. ನಗರದ ನೂರು ಹಾಸಿಗೆ ಆಸ್ಪತ್ರೆಗೆ ಶಾಸಕ ಎಚ್‌.ಆರ್‌. ಗವಿಯಪ್ಪ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.