ಟಿಪ್ಪುವಿನ ವೀರತನ ಒಳಿತಿಗಿಂತ ಕೆಡುಕಿಗೆ ಹೆಚ್ಚು ಬಳಕೆಯಾಯಿತು: ವಿಕ್ರಂ ಸಂಪತ್

| Published : Jan 21 2025, 12:32 AM IST

ಟಿಪ್ಪುವಿನ ವೀರತನ ಒಳಿತಿಗಿಂತ ಕೆಡುಕಿಗೆ ಹೆಚ್ಚು ಬಳಕೆಯಾಯಿತು: ವಿಕ್ರಂ ಸಂಪತ್
Share this Article
  • FB
  • TW
  • Linkdin
  • Email

ಸಾರಾಂಶ

ಕಲಿಸು ಫೌಂಡೇಶನ್‌ ಪ್ರಕಟಿಸಿರುವ ಟಿಪ್ಪು ಸುಲ್ತಾನ್‌ ಕೃತಿಯ ಲೋಕಾರ್ಪಣೆ ಸಮಾರಂಭ ನಡೆಯಿತು. ಖ್ಯಾತ ಲೇಖಕ ಡಾ. ವಿಕ್ರಂ ಸಂಪತ್‌ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಎಂದಿಗೂ ಇತಿಹಾಸದ ವಾಸ್ತವತೆಗಳನ್ನು ಮರೆಯಬಾರದೆಂಬ ದೃಷ್ಟಿಯಲ್ಲಿ ಪಠ್ಯ ಪುಸ್ತಕಗಳಲ್ಲಿ ಇತಿಹಾಸದಲ್ಲಿ ಸಂಭವಿಸಿದ ನೈಜ ವಿಷಯಗಳನ್ನು ತಿಳಿಸುವುದು ಸೂಕ್ತ. ಆ ಮೂಲಕ ಇತಿಹಾಸದಲ್ಲಿ ಸಂಭವಿಸಿದ್ದ ಕರಾಳ ಘಟನೆಗಳೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಛಾಪೊತ್ತಬೇಕೆಂದು ಖ್ಯಾತ ಲೇಖಕ ಡಾ. ವಿಕ್ರಂ ಸಂಪತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೋಣಿಕೊಪ್ಪಲುವಿನ ಪರಿಮಳ ಮಂಗಳ ಸಭಾಭವನದಲ್ಲಿ ಆಯೋಜಿತ ಕಲಿಸು ಫೌಂಡೇಷನ್ ಪ್ರಕಟಿಸಿರುವ ಟಿಪ್ಪು ಸುಲ್ತಾನ್ ಕೃತಿಯ ಲೋಕಾಪ೯ಣೆ ಸಮಾರಂಭದಲ್ಲಿ ಮಾತನಾಡಿದ ಇತಿಹಾಸ ಸಂಶೋಧಕರೂ ಆಗಿರುವ ಡಾ. ವಿಕ್ರಂ ಸಂಪತ್, ಇತಿಹಾಸ ಎಂಬುದು ಪಠ್ಯ ಪುಸ್ತಕಗಳಲ್ಲಿ ವಾಸ್ತವತೆಯ ನೆಲೆಗಟ್ಟಿನಲ್ಲಿ ದಾಖಲಾಗಬೇಕು. ಯಾರದ್ದೋ ಅಣತಿ ಪಾಲಿಸಲು, ಯಾರನ್ನೋ ಸಂತೋಷಪಡಿಸಲು ಇತಿಹಾಸದ ವಿಚಾರಗಳು ಕೃತಿ ಅಥವಾ ಪಠ್ಯದಲ್ಲಿ ಪ್ರಕಟವಾಗಿರಬಾರದು. ಇತಿಹಾಸದ ನೈಜಾಂಶಗಳನ್ನು ಗ್ರಹಿಸಿಕೊಂಡು ಮುಂದೆ ಸಾಗಿದರೆ ಭಾರತದ ಕನಸಾದ ವಿಕಸಿತ ಭಾರತದ ಗುರಿ ತಲುಪಲು ಸುಲಭಸಾಧ್ಯ ಎಂದು ಹೇಳಿದರು.

ಮೈಸೂರು ರಾಜಮನೆತನದ ಆಶ್ರಯ ಬಯಸಿ ಶ್ರೀರಂಗಪಟ್ಟಣಕ್ಕೆ ಬಂದು ನಂತರದ ದಿನಗಳಲ್ಲಿ ರಾಜರ ಸೈನ್ಯದ ನಾಯಕನಾಗಿ ವಿಜೃಂಭಿಸಿದ್ದ ಹೈದರಾಲಿಗೆ ಕನಿಷ್ಠ ಪಕ್ಷ ಧರ್ಮ ಸಂರಕ್ಷಣೆಯ ಅರಿವಾದರೂ ಇತ್ತು. ಮೈಸೂರಿನಲ್ಲಿ ದಸರಾದಂಥ ನಾಡಹಬ್ಬವನ್ನು ಹೈದರಾಲಿ ಆಚರಿಸುತ್ತಿದ್ದ. ಆದರೆ ಇದೇ ಹೈದರಾಲಿಯ ಮಗನಾದ ಟಿಪ್ಪು ಸುಲ್ತಾನ್ ಕ್ರೂರತೆಗೆ ಉದಾಹರಣೆಯಂತಾದ ಎಂದು ತನ್ನ ಕೃತಿಯಲ್ಲಿ ಸಂಶೋಧನೆ ಸಹಿತ ದಾಖಲಿಸಲಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ ಡಾ. ವಿಕ್ರಂಸಂಪತ್, ಬ್ರಿಟಿಷರ ವಿರುದ್ಧ ಹೋರಾಡಲು ಟಿಪ್ಪು ಸುಲ್ತಾನ್ ಪರ್ಷಿಯಾ ದೇಶದವರ ನೆರವನ್ನು ಪಡೆದಿದ್ದ. ಹೀಗಾಗಿ ಬ್ರಿಟಿಷರ ವಿರುದ್ಧ ಭಾರತದ ಪರವಾಗಿ ಟಿಪ್ಪು ತಾನೋರ್ವನೆ ಹೋರಾಟ ಮಾಡಿದ್ದ ಎನ್ನಲಾಗದು ಎಂದು ಪ್ರತಿಪಾದಿಸಿದ ವಿಕ್ರಂಸಂಪತ್, ತನ್ನ ವಿರುದ್ಧ ಇರುವವರನ್ನು ಮತ್ತು ತನ್ನ ವಿರುದ್ಧ ಇದ್ದಾರೆ ಎಂದು ತನಗೆ ಯಾರಾದರೂ ಹೇಳಿದರೆ ಸಾಕು ಅಂಥ ವಿರೋಧಿಗಳನ್ನು ಸಂಹಾರ ಮಾಡುವುದೇ ಟಿಪ್ಪುವಿನ ಗುರಿಯಾಗಿತ್ತು, ಟಿಪ್ಪು ನಿಜಕ್ಕೂ ವೀರನಾಗಿದ್ದ. ಆದರೆ, ಆತನ ವೀರತನ ಒಳಿತಿಗಿಂತ ಕೆಡುಕಿಗೆ ಹೆಚ್ಚು ಬಳಕೆಯಾಗಿ ಟಿಪ್ಪುವನ್ನು ಕುಖ್ಯಾತನನ್ನಾಗಿಸಿತು ಎಂದೂ ಲೇಖಕ ವಿಕ್ರಂ ಸಂಪತ್ ಹೇಳಿದರು.

ಟಿಪ್ಪುಸುಲ್ತಾನ್ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕೊಡಗು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಕೊಡಗಿನ ಸಂಸ್ಕೃತಿ, ಸಾಂಸ್ಕೃತಿಕ ಶ್ರೀಮಂತಿಕೆಯೇ ಕೊಡಗಿನ ಪರಿಚಯ ಮಾಡಿಕೊಡುತ್ತದೆ, ಟಿಪ್ಪು ಕಾಲದ ಕರಾಳತೆಯನ್ನು ಕೃತಿಯಲ್ಲಿ ಹೇಳಲಾಗಿದೆ. ಕೊಡಗಿನ ಸಮಗ್ರ ಇತಿಹಾಸ ಬಿಂಬಿಸುವ ದಾಖಲೆಯ ಆಧಾರದ ಕೃತಿಯೂ ಅಗತ್ಯವಾಗಿದೆ ಎಂದರಲ್ಲದೇ, ವಿಕಸಿತ ಭಾರತದ ಪರಿಕಲ್ಪನೆಯಲ್ಲಿ ಕೊಡಗನ್ನು ಪ್ರಗತಿಗೊಳಿಸಬೇಕು ಎಂದು ಯದುವೀರ್ ಹೇಳಿದರು.

ಸಮಾರಂಭದಲ್ಲಿ ತ್ರಿಭಾಷಾ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಸೇರಿದಂತೆ ಕೊಡಗಿನ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ನಿತಿನ್ ಕಾರ್ಯಪ್ಪ ಲೇಖಕರೊಂದಿಗೆ ಸಂವಾದ ನಡೆಸಿದರು.