ಸಮಾಜದಲ್ಲಿ ಟಿಪ್ಪು ಹೆಸರಿಗೆ ಕಳಂಕ ಬರುವುದು ಬೇಡ: ತನ್ವೀರ್ ಸೇಠ್

| Published : Nov 11 2025, 01:45 AM IST

ಸಾರಾಂಶ

ಸಾಮೂಹಿಕ ಪ್ರಾರ್ಥನೆಗಳು ಹಿಂದಿನಿಂದಲೂ ನಡೆದು ಬಂದಿವೆ. ಟಿಪ್ಪು ಜಯಂತಿ ಆಚರಣೆ ಮಾಡುವಂತೆ ನಾವು ಯಾವತ್ತೂ ಸರ್ಕಾರವನ್ನು ಕೇಳಿಲ್ಲ. ಸರ್ಕಾರವೇ ಆಚರಣೆ ಮಾಡಿ ನಂತರ ನಿಲ್ಲಿಸಿದ್ದಾರೆ. ಸರ್ಕಾರದಿಂದ ಟಿಪ್ಪು ಜಯಂತಿ ಮಾಡುವುದರ ವಿರುದ್ಧ ನಾನು ಇದ್ದೀನಿ. ಸರ್ಕಾರ ಟಿಪ್ಪು ಜಯಂತಿ ಮಾಡಲಿ, ಬಿಡಲಿ ನಾವು ನಮ್ಮ ಆಚರಣೆ ಮುಂದುವರಿಸುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಮಾಜದಲ್ಲಿ ಟಿಪ್ಪು ಹೆಸರಿಗೆ ಕಳಂಕ ಬರುವುದು ಬೇಡ. ಶಾಂತಿ, ಸಾಮರಸ್ಯ ಸಹಬಾಳ್ವೆಯಿಂದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರೋಣ ಎಂದು ಟಿಪ್ಪು ವಕ್ಫ್‌ ಕಮೀಟಿ ಅಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ಹೇಳಿದರು.

ಟಿಪ್ಪು ಜಯಂತಿ ಅಂಗವಾಗಿ ಪಟ್ಟಣದ ಗಂಜಾಂನ ಗುಂಬಸ್‌ಗೆ ಭೇಟಿ ನೀಡಿ ಟಿಪ್ಪು ಸಮಾಧಿಗೆ ಚಾದರ ಹೊದಿಸಿ ವಿಶೇಷ ಪ್ರಾರ್ಥನೆ ಮಾಡಿದ ನಂತರ ಮಾತನಾಡಿ, ಟಿಪ್ಪು ಸುಲ್ತಾನರ ಜನ್ಮ ದಿನದಂದು ಗುಂಬಜ್‌ನಲ್ಲಿ ಆಚರಣೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ನಂಬಿಕೆ, ವಿಚಾರವಾಗಿ ಟಿಪ್ಪು ಸುಲ್ತಾನರ ಸಿದ್ಧಾಂತಗಳನ್ನು ಇಟ್ಟುಕೊಂಡು ಪ್ರಾರ್ಥನೆ ಮಾಡುತ್ತೇವೆ. ಇದೇನು ಹೊಸದಲ್ಲ ಎಂದರು.

ಸಾಮೂಹಿಕ ಪ್ರಾರ್ಥನೆಗಳು ಹಿಂದಿನಿಂದಲೂ ನಡೆದು ಬಂದಿವೆ. ಟಿಪ್ಪು ಜಯಂತಿ ಆಚರಣೆ ಮಾಡುವಂತೆ ನಾವು ಯಾವತ್ತೂ ಸರ್ಕಾರವನ್ನು ಕೇಳಿಲ್ಲ. ಸರ್ಕಾರವೇ ಆಚರಣೆ ಮಾಡಿ ನಂತರ ನಿಲ್ಲಿಸಿದ್ದಾರೆ. ಸರ್ಕಾರದಿಂದ ಟಿಪ್ಪು ಜಯಂತಿ ಮಾಡುವುದರ ವಿರುದ್ಧ ನಾನು ಇದ್ದೀನಿ. ಸರ್ಕಾರ ಟಿಪ್ಪು ಜಯಂತಿ ಮಾಡಲಿ, ಬಿಡಲಿ ನಾವು ನಮ್ಮ ಆಚರಣೆ ಮುಂದುವರಿಸುತ್ತಿದ್ದೇವೆ ಎಂದರು.

ಟಿಪ್ಪು ಎಂದರೆ ಧರ್ಮಗಳಿಗೆ ಭಯ ಹುಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್ ಅವರ ಆಡಳಿತ, ಸಿದ್ಧಾಂತಗಳನ್ನು ನಾವು ಗೌರವಿಸಬೇಕು. ಅನೇಕರಿಗೆ ಟಿಪ್ಪುವಿನ ಚರಿತ್ರೆ ಅನ್ಯಧರ್ಮಿಯ ವಿರೋಧಿ ಎಂದು ಬಿಂಬಿಸಲು ಕೆಲವರು ಮುಂದಾಗಿದ್ದಾರೆ. ಟಿಪ್ಪು ಸುಲ್ತಾನ್ ಅವರು ಇದ್ದಾಗಲೇ ಶ್ರೀರಂಗಪಟ್ಟಣ ದಸರಾ ಆಚರಣೆ ಮಾಡುತ್ತಿದ್ದವರು ಎಂದರು.

ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ನಾವು ಸಹ ಗುಂಪು ಕಟ್ಟಿಕೊಂಡು ಬರುವುದು ಬೇಡ ಎಂದು ಎಲ್ಲರಿಗೂ ಹೇಳಿದ್ದೇವೆ. ನಾವು ಹೊರಗಡೆ ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ. ಎಲ್ಲರನ್ನೂ ಶಾಂತಿಯುತವಾಗಿ ಎಲ್ಲರನ್ನು ಗೌರವದಿಂದ ಕಾಣಬೇಕು. ಯಾರಿಗೂ ತೊಂದರೆ ಆಗಬಾರದು ಎಂದು ನಾವು ಇಂದು ಕೇವಲ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ ಎಂದರು.

ಶಾಸಕ ತನ್ವೀರ್ ಸೇಟ್ ಅವರ ಅಭಿಮಾನಿಗಳು ಆಪ್ತರು ಮಾತ್ರ ಜೊತೆಯಲ್ಲಿದ್ದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲ

ಕೆ.ಆರ್.ಪೇಟೆ: ಕಬ್ಬು ಬೆಳೆಗಾರರು ಸೇರಿದಂತೆ ರಾಜ್ಯದ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ರಸಗೊಬ್ಬರಗಳ ಬೆಲೆ ಏರಿಕೆ, ದುಬಾರಿಯಾಗಿರುವ ಸಾಗಾಣಿಕೆ ಮತ್ತು ಕಬ್ಬು ಕಟಾವು ದರ, ವಿದ್ಯುತ್ ಸಮಸ್ಯೆ, ಕೃಷಿ ಕಾರ್ಮಿಕರ ಕೊರತೆ ಮತ್ತಿತರ ನಾನಾ ಕಾರಣಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಿಡಿಕಾರಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ನಡೆಸದ ರಾಜ್ಯ ಸರ್ಕಾರ ಕೇವಲ ಕುರ್ಚಿ ಕಾದಾಟದಲ್ಲಿ ನಿರತವಾಗಿದೆ. ಪ್ರತಿ ಟನ್ ಕಬ್ಬಿಗೆ ಕನಿಷ್ಠ 3500 ರು. ಬೆಲೆ ನಿಗಧಿಪಡಿಸುವಂತೆ ರಾಜ್ಯದಲ್ಲಿ ರೈತರು ಹೋರಾಟಕ್ಕಿಳಿದ್ದಾರೆ. ರೈತರ ಹೋರಾಟಕ್ಕೆ ಮಂಡ್ಯ ಜಿಲ್ಲೆಯ ರೈತರ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಕುರ್ಚಿ ಕಾದಾಟವನ್ನು ಬದಿಗಿಟ್ಟು ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವಂತೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡೂ ರೈತ ವಿರೋಧಿಗಳಾಗಿವೆ. ರೈತ ಚಳವಳಿಗೆ ಬಿಜೆಪಿ ನಾಯಕರು ಬೆಂಬಲ ನೀಡುತ್ತಿರುವುದು ಸೋಗಲಾಡಿತನ. ನೈತಿಕತೆ ಇಲ್ಲದ ರಾಜಕೀಯ ಪಕ್ಷಗಳು ಮತ್ತು ಭ್ರಷ್ಟ ಸರ್ಕಾರಿ ನೌಕರರು ದಿನನಿತ್ಯ ರೈತರ ಸುಲಿಗೆಯಲ್ಲಿ ನಿರತರಾಗಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಸರ್ಕಾರ ನಿಗದಿಪಡಿಸಿದ ದರ ಮಾರ್ಗಸೂಚಿಗಿಂತ ಹೆಚ್ಚುವರಿಯಾಗಿ ಕಾರ್ಖಾನೆಗಳು ರೈತರಿಗೆ ನೀಡಿಲ್ಲ. ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದ ರೈತ ಚಳವಳಿಗೆ ಕಾಂಗ್ರೆಸ್ ಪಕ್ಷ ಅಂದು ಸಂಪೂರ್ಣ ಬೆಂಬಲ ನೀಡಿತ್ತು. ಆದರೆ, ಇಂದು ರೈತರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.