ಸಾರಾಂಶ
ಶಿರಸಿ: ೭೮ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿರುವ ವಾಕ್‌ಥಾನ್ ತಿರಂಗಾ ಜಾಥಾಕ್ಕೆ ಶಾಸಕ ಭೀಮಣ್ಣ ನಾಯ್ಕ ಬುಧವಾರ ಚಾಲನೆ ನೀಡಿದರು.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರಪ್ರೇಮ ಜಾಗ್ರತಗೊಳಿಸಲು ತಾಲೂಕಾಡಳಿತದಿಂದ ವಾಕ್‌ಥಾನ್ ತಿರಂಗಾ ಜಾಥಾ ಹಮ್ಮಿಕೊಳ್ಳಲಾಗಿದ್ದು, ಈ ನಿಮಿತ್ತ ನಗರದ ಮಾರಿಕಾಂಬಾ ಪ್ರೌಢಶಾಲೆಯ ಆವರಣದಲ್ಲಿ ಜಾಥಾಕ್ಕೆ ಶಾಸಕರು ಚಾಲನೆ ನೀಡಿದರು.ಬೆಳಗ್ಗೆ ೭.೩೦ರಿಂದ ವಾಕ್‌ಥಾನ್ ತಿರಂಗಾ ಜಾಥಾವು ಆರಂಭಗೊಂಡಿದ್ದು, ಮಾರಿಕಾಂಬಾ ಪ್ರೌಢಶಾಲೆಯಿಂದ ಹೊರಟ ಜಾಥಾವು ಅಶ್ವಿನಿ ಸರ್ಕಲ್, ಹಳೆ ಬಸ್ ನಿಲ್ದಾಣ, ಶಿವಾಜಿ ಚೌಕ, ಝೂ ಸರ್ಕಲ್, ರಾಘವೇಂದ್ರ ವೃತ್ತ ಮೂಲಕ ಮಾರಿಕಾಂಬಾ ಪ್ರೌಢಶಾಲೆಯ ಆವರಣದಲ್ಲಿ ಕೊನೆಗೊಂಡಿತು.
ಶಾಸಕ ಭೀಮಣ್ಣ ನಾಯ್ಕ ಅವರು ರಾಷ್ಟ್ರ ಧ್ವಜ ಹಿಡಿದು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ವಿವಿಧ ಸಂಘಟಗನೆಗಳ ಜತೆ ಹೆಜ್ಜೆ ಹಾಕಿ ಹುರಿದುಂಬಿಸಿದರು.ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಿರಣಕುಮಾರ ನಾಯ್ಕ, ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ. ಪಾಲ್ಗೊಂಡಿದ್ದರು.
ಸ್ವಾತಂತ್ರ್ಯೋತ್ಸವ, ಮುಂಡಗೋಡಲ್ಲಿ ವಾಕ್‌ಥಾನ್:ಮುಂಡಗೋಡ ತಾಲೂಕಾಡಳಿತ, ಮುಂಡಗೋಡ ತಾಪಂ, ಶಿಕ್ಷಣ ಇಲಾಖೆ, ಮುಂಡಗೋಡ ಪಟ್ಟಣ ಪಂಚಾಯಿತಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ೭೮ನೇ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಬುಧವಾರ ಪಟ್ಟಣದಲ್ಲಿ ವಾಕ್‌ಥಾನ್ ನಡೆಯಿತು.ಈ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಂಕರ ಗೌಡಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಇಲ್ಲಿಯ ಪ್ರವಾಸಿ ಮಂದಿರದಿಂದ ಹೊರಟ ವಾಕ್‌ಥಾನ್ ಜಾಥಾ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಚಂದ್ರಶೇಖರ, ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕೊಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕ, ಶಿಕ್ಷಕಿಯರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.