ಹೊಸಪೇಟೆಯಲ್ಲಿ ತಿರಂಗಾ ಯಾತ್ರೆ: ಯೋಧರಿಗೆ ಗೌರವ

| Published : May 18 2025, 01:13 AM IST

ಹೊಸಪೇಟೆಯಲ್ಲಿ ತಿರಂಗಾ ಯಾತ್ರೆ: ಯೋಧರಿಗೆ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆ ವೀರ ಯೋಧರಿಗೆ ಗೌರವ ಸಲ್ಲಿಸಲು ನಗರದಲ್ಲಿ ಶನಿವಾರ ತಿರಂಗಾ ಯಾತ್ರೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಆಪರೇಷನ್ ಸಿಂದೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆ ವೀರ ಯೋಧರಿಗೆ ಗೌರವ ಸಲ್ಲಿಸಲು ನಗರದಲ್ಲಿ ಶನಿವಾರ ತಿರಂಗಾ ಯಾತ್ರೆ ನಡೆಸಲಾಯಿತು.

ನಗರದ ಶ್ರೀವಡಕರಾಯ ದೇವಸ್ಥಾನದಿಂದ ಪಾದಗಟ್ಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಗಾಂಧಿಚೌಕ್, ಪುಣ್ಯಮೂರ್ತಿ ಸರ್ಕಲ್, ಬಸ್ ನಿಲ್ದಾಣ, ಅಶೋಕ್ ಸರ್ಕಲ್, ಡಾ. ಶ್ರೀಪುನೀತ್ ರಾಜಕುಮಾರ್ ಸರ್ಕಲ್, ಶ್ರೀ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸರ್ಕಲ್ ವರೆಗೆ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘ ನಗರದ ಉದ್ಯಮಿಗಳು, ವ್ಯಾಪಾರಸ್ಥರು, ನಾಗರಿಕರು ಹಾಗೂ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ವಿಜಯನಗರ ಜಿಲ್ಲಾ ಬಿಜೆಪಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಪ್ರತಿಯೊಬ್ಬ ಭಾರತೀಯ ದೇಶಭಕ್ತಿ ತೋರಿಸುವ ಸಮಯ ಇದು. ದೇಶದ ವಿಚಾರದಲ್ಲಿ ಜಾತಿ-ಧರ್ಮ ಇಲ್ಲ. ಎಲ್ಲರೂ ಒಂದೇ. ಶತೃ ರಾಷ್ಟ್ರಕ್ಕೆ ಭಾರತ ತಕ್ಕ ಬುದ್ದಿ ಕಲಿಸಿದೆ. ಪ್ರತಿಯೊಬ್ಬರು ಪ್ರಧಾನಿ ಮೋದಿಯವರ ಕೈ ಬಲಪಡಿಸಬೇಕು. ಉಗ್ರಗಾಮಿಗಳನ್ನು ಹೊಡೆದು ಹಾಕಬೇಕು. ನಮ್ಮದು ಬಲಿಷ್ಠ ದೇಶ. ನಮ್ಮ ಮೂರು ಸೇನೆಗಳು ಬಲವಾಗಿವೆ. ಶತೃ ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಿವೆ ಎಂದರು.

ಹುಡಾ ಅಧ್ಯಕ್ಷ ಎಚ್ಎನ್‌ಎಫ್‌ ಇಮಾಮ್ ನಿಯಾಜಿ ಮಾತನಾಡಿ, ಎಲ್ಲ ಸಮಾಜದವರನ್ನು ಆಹ್ವಾನಿಸಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಭಾರತೀಯ ಸೇನೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿವೆ. ನಾವೆಲ್ಲ ಭಾರತೀಯರು ಒಂದೇ. ನಮ್ಮ ಸೈನಿಕರು ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಭಗವಂತ ಸೈನಿಕರಿಗೆ ಇನ್ನೂ ಶಕ್ತಿ ಕೊಡಲಿ. ನಾವು ಕೇಂದ್ರ ಸರ್ಕಾರದ ಜತೆಗೆವಿರುತ್ತೇವೆ. ನಮ್ಮ ತಂಟೆಗೆ ಬಂದರೆ ಏನಾಗುತ್ತದೆ ಎಂದು ಈಗಾಗಲೇ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತೋರಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಸಂಜೀವರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಅಶೋಕ್ ಜೀರೆ, ಪ್ರಹ್ಲಾದ್ ಭೂಪಾಳ್, ಶಂಕರಮೇಟಿ, ಮಂಜುನಾಥ ಗುಪ್ತ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ, ರಾಜೇಂದ್ರ ಕಾಕುಬಾಳ, ಭರಮನಗೌಡ, ಕಿಚಿಡಿ ಕೊಟ್ರೇಶ್, ಕಟಿಗಿ ಜಂಬಯ್ಯ ಸೇರಿ ಇತರರಿದ್ದರು.