ಸಾರಾಂಶ
ಚಿಕ್ಕಮಗಳೂರು: ಪಾಕಿಸ್ತಾನದ ಉಗ್ರರ ನೆಲೆಗಳನ್ನು ನಾಶಗೊಳಿಸಿದ ಮತ್ತು ಉಗ್ರರ ಚಟುವಟಿಕೆಗಳನ್ನು ಮಟ್ಟ ಹಾಕಲು ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ಹೋರಾಡಿದ ಮತ್ತು ಹೋರಾಡುತ್ತಿರುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಂಘಟನೆಯಿಂದ ಪಕ್ಷತೀತವಾಗಿ ಶುಕ್ರವಾರ ಸಂಜೆ ಚಿಕ್ಕಮಗಳೂರಿನಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ಚಿಕ್ಕಮಗಳೂರಿನ ಶ್ರೀ ಗಣಪತಿ ಓಂಕಾರೇಶ್ವರ ದೇವಾಲಯದ ಆವರಣದಿಂದ ಸಾವಿರಾರು ಸಾರ್ವಜನಿಕರು ಪಕ್ಷಬೇಧ ಮರೆತು ತ್ರಿವರ್ಣ ಧ್ವಜ ಹಿಡಿದು ಭಾರತ ಮಾತೆಗೆ ಹಾಗೂ ಸೈನಿಕರ ಪರವಾಗಿ ಘೋಷಣೆ ಕೂಗುತ್ತಾ ಆಜಾದ್ ಪಾರ್ಕ್ ವೃತ್ತದವರೆಗೆ ತ್ರಿರಂಗಾ ಯಾತ್ರೆ ನಡೆಸಿದರು.ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಭಾರತ ಮತ್ತು ಭಾರತದ ಸೈನಿಕರಿಗೆ ನಾವೆಲ್ಲಾ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂಬುದನ್ನು ತೋರಿಸುವ ಜೊತೆಗೆ ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ತಿರಂಗಾ ಯಾತ್ರೆ ನಡೆಸುತ್ತಿರುವುದು ಸ್ವಾಗತಾರ್ಹ ಎಂದರು.
ಪಾಕಿಸ್ತಾನ ಭಯೋತ್ಪಾದನೆ ಬೀಜ ಬಿತ್ತಿ ಭಾರತವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಭಯೋತ್ಪಾದನೆ ಮಾನವತೆಗೆ ವಿರೋಧಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡುತ್ತಿದೆ ಜೊತೆಗೆ ಸಂವಿಧಾನಕ್ಕೆ ಅಪಾಯಕಾರಿ. ಹೀಗಾಗಿ ಭಯೋತ್ಪಾದನೆ ಕೊನೆಯಾಗಲೇ ಬೇಕು. ಕೇವಲ ಭಯೋತ್ಪಾದಕರನ್ನು ಮಟ್ಟ ಹಾಕುವುದರಿಂದ ಭಯೋತ್ಪಾದನೆ ಕೊನೆಯಾಗುವುದಿಲ್ಲ. ಭಯೋತ್ಪಾದನೆಯ ಡಿಎನ್‌ಎ ಎಲ್ಲಿದೆಯೋ ಅದನ್ನು ನಾಶಮಾಡಬೇಕಿದೆ. ಇಲ್ಲದಿದ್ದರೆ ಒಬ್ಬ ಭಯೋತ್ಪಾದಕನನ್ನು ಕೊಂದರೆ ಇನ್ನೊಬ್ಬ ಭಯೋತ್ಪಾದಕ ಹುಟ್ಟಿಕೊಳ್ಳುತ್ತಾನೆ. ಹೀಗಾಗಿ ಭಯೋತ್ಪಾದಕರ ಡಿಎನ್‌ಎ ಅನ್ನು ನಾಶಮಾಡಬೇಕಿದೆ ಎಂದು ಹೇಳಿದರು.ಇಡೀ ಭಾರತ ಒಂದಾಗಿ ಮಾನವತೆ ಉಳಿಸಲು ಭಯೋತ್ಪಾದಕರು ಮತ್ತು ಭಯೋತ್ಪಾದನೆ ಕೊನೆಯಾಗಲೇಬೇಕು. ಹಿಂದಿನಿಂದಲೂ ನಾವು ಕೆಲವರನ್ನು ನಂಬಿ ನಮ್ಮ ದೇಶದ ಕೆಲಭಾಗಗಳನ್ನು ಕಳೆದುಕೊಂಡಿದ್ದೇವೆ ಇನ್ನೆಂದೂ ಹೀಗಾಗ ಬಾರದು ಎಂದರು.
ಮಾಜಿ ಸೈನಿಕ ಪ್ರದೀಪ್ ನೇತೃತ್ವದಲ್ಲಿ ನಡೆದ ತಿರಂಗಾ ಯಾತ್ರೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಸಚಿವ ಡಿ.ಎನ್. ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ದೀಪಕ್ ದೊಡ್ಡಯ್ಯ, ಕೆ.ಎಸ್.ಪುಷ್ಪರಾಜ್ ಸೇರಿದಂತೆ ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು. 16 ಕೆಸಿಕೆಎಂ 3ಚಿಕ್ಕಮಗಳೂರಿನಲ್ಲಿ ಶುಕ್ರವಾರ ನಡೆದ ತಿರಂಗಾ ಯಾತ್ರೆಯ ದೃಶ್ಯ.