ಸಂಬಳ ಕೊಡುವಂತೆ ಪತಿಯಿಂದ ಕಿರುಕುಳ: ಬೇಸತ್ತು ಪತ್ನಿ ಆತ್ಮಹತ್ಯೆ

| Published : Oct 06 2024, 01:23 AM IST

ಸಾರಾಂಶ

ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳಾ ಟೆಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳಾ ಟೆಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಜೀಪುರ ನಿವಾಸಿ ಮೇಘನಾ ಶೆಟ್ಟಿ(27) ಮೃತ ಟೆಕಿ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಮೃತಳ ಪೋಷಕರು ಅಳಿಯ ಸುದೀಪ್‌ (30) ವಿರುದ್ಧ ವರಕ್ಷಿಣೆ ಕಿರುಕುಳ ಆರೋಪದ ಮಾಡಿದ್ದು, ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಸುದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ಮೂಲದ ಮೇಘನಾ ಶೆಟ್ಟಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಸಾಫ್ಟ್‌ವೇರ್‌ ಎಂಜಿನಿಯರ್‌ ಸುದೀಪ್‌ನನ್ನು ಮದುವೆಯಾಗಿದ್ದರು. ದಂಪತಿಗೆ ಒಂದು ವರ್ಷದ ಮಗುವಿದೆ. ದಂಪತಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಈಜೀಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಕೆಲ ತಿಂಗಳಿಂದ ಕೌಟುಂಬಿಕ ವಿಚಾರಕ್ಕೆ ದಂಪತಿ ಜಗಳವಾಡುತ್ತಿದ್ದರು. ಪತಿ ಸುದೀಪ್‌, ಕಾರು ಸೇರಿದಂತೆ ಕೆಲವೊಂದು ವಸ್ತುಗಳನ್ನು ಖರೀದಿಸಬೇಕು. ನಿನ್ನ ಸಂಬಳವನ್ನು ತನಗೆ ನೀಡುವಂತೆ ಮೇಘನಾ ಶೆಟ್ಟಿಗೆ ಒತ್ತಾಯಿಸುತ್ತಿದ್ದ. ಇದಕ್ಕೆ ಮೇಘನಾ ಶೆಟ್ಟಿ ನಿರಾಕರಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

ರೂಮ್‌ನಲ್ಲಿ ನೇಣಿಗೆ ಶರಣು: ಶುಕ್ರವಾರ ರಾತ್ರಿ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಮೇಘನಾ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ಪತಿ ಸುದೀಪ್‌ ಕೋಣೆಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಮೇಘನಾ ಶೆಟ್ಟಿ ಪೋಷಕರಿಗೆ ವಿಷಯ ತಿಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪರೀಕ್ಷಿಸಿದ ವೈದ್ಯರು ಮೇಘನಾ ಶೆಟ್ಟಿ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೇಘನಾ ಶೆಟ್ಟಿ ಪೋಷಕರು ನೀಡಿದ ದೂರಿನ ಮೇರೆಗೆ ವಿವೇಕನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.