ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹತ್ಯೆ

| Published : Mar 17 2025, 12:33 AM IST

ಸಾರಾಂಶ

ಪತ್ನಿ ಕಿರುಕುಳಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪತ್ನಿ ಕಿರುಕುಳಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಪರಶಿವ (೨೮) ಮೃತ ವ್ಯಕ್ತಿ. ಈತನ ಪತ್ನಿ ಕಿಳಲೀಪುರ ಗ್ರಾಮದ ನಿವಾಸಿ ಮಮತ (೨೩) ಕಿರುಕುಳ ನೀಡಿರುವ ಆರೋಪಿ. ಈಕೆ ಮತ್ತು ಕುಟುಂಬದವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಭೇಟಿ ನೀಡಿ, ಪರಿಶೀಲನೆ ಮಾಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ಉಡಿಗಾಲ ಗ್ರಾಮದ ನಿವಾಸಿ ಜೆಸಿಬಿ ಡ್ರೈವರ್ ಆಗಿದ್ದ ಪರಶಿವ ಹಾಗೂ ಕೀಳಲಿಪುರ ಮಮತ ಅವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು. ಇಬ್ಬರು ಸಹ ಅನ್ಯೋನ್ಯವಾಗಿದ್ದರು.

ದಿನ ಕಳೆದಂತೆ ಪತ್ನಿ ಮಮತ ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣಕ್ಕೆ ಪೋಟೊಗಳನ್ನು ಹಾಕುವ ಹವ್ಯಾಸ ಬೆಳೆಸಿಕೊಂಡಿದ್ದು, ಮದುವೆಯಾದ ಗಂಡನನ್ನೇ ನಿನಗೆ ಕೂದಲು ಇಲ್ಲ. ಬೋಳು ತಲೆ ನನಗೆ ಸರಿಯಾದ ವರ ಅಲ್ಲ ಎಂದು ಸಂಬಂಧಿಕರ ಮುಂದೆಲ್ಲ ಅವಮಾನ ಮಾಡುತ್ತಿದ್ದಳಂತೆ. ಅಲ್ಲದೇ ಗಂಡನ ವಿರುದ್ಧ ವರದಕ್ಷಿಣೆ ಕೇಸು ಹಾಕಿ ಒಂದೂವರೆ ತಿಂಗಳು ಜೈಲಿನಲ್ಲಿರುವಂತೆ ಮಾಡಿದ್ದಳು. ಪದೇ ಪದೇ ಕರೆ ಮಾಡಿ, ಬೈಯುವುದು ಹಾಗೂ ಹೀಯಾಳಿಸುತ್ತಿದ್ದಳು ಎನ್ನಲಾಗಿದೆ.

ಇದರಿಂದ ಬೇಸತ್ತ ಪತಿ ಪರಶಿವ ಭಾನುವಾರ ಮಧ್ಯಾಹ್ನ ಉಡಿಗಾಲದ ತಮ್ಮ ಮನೆಯಲ್ಲೇ ನೇಣು ಬಿಗಿದು ಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ..ಈತ ನನ್ನ ಸಾವಿಗೆ ಪತ್ನಿ ನೀಡುತ್ತಿದ್ದ ಕಿರುಕುಳ ಕಾರಣ ಎಂದು ಡೆತ್ ನೋಟ್ ಬರೆದು ಇಟ್ಟಿದ್ದು, ಪೊಲೀಸರು ಡೆತ್‌ನೋಟ್ ಜಪ್ತಿ ಮಾಡಿ ತನಿಖೆ ಮುಂದುವರಿಸಿದ್ದಾರೆ.