ಯಲಬುರ್ಗ: ವಿಂಡ್ ಪವರ್ ಸಿಬ್ಬಂದಿಗಳ ದೌರ್ಜನ್ಯದಿಂದ ಬೇಸತ್ತ ರೈತನೊಬ್ಬ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಕುಳಿತ ಘಟನೆ ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ನಡೆದಿದೆ.

ಯಾವುದೇ ನೋಟಿಸ್ ಇಲ್ಲದೆ ಕಂಪನಿಯವರು ಕಂಬ ಹಾಕುತ್ತಿದ್ದಾರೆಂದು ಗ್ರಾಮದ ನಾಗರಾಜ ಗೊಂದಿ ಎಂಬ ರೈತ ಬೆಳಗ್ಗೆಯಿಂದಲೇ ಹೈ ಟೆನ್ಷನ್ ವಿದ್ಯುತ್ ಕಂಬ ಏರಿ ಮೇಲೆ ಕುಳಿತಿದ್ದಾನೆ. ನೆತ್ತಿ ಸುಡುವ ಬಿಸಿಲಿನ ನಡುವೆಯೂ ಜೀವದ ಹಂಗನ್ನೂ ಲೆಕ್ಕಿಸದೇ ಬೃಹತ್ ಗಾತ್ರದ ಕಂಬ ಏರಿ ಕಂಪನಿ ವಿರುದ್ಧ ಪ್ರತಿಭಟಿಸಿದ್ದಾನೆ.

ವಿಂಡ್ ಪವರ್ ಸಿಬ್ಬಂದಿ ವಿದ್ಯುತ್ ವೈರ್ ಕನೆಕ್ಷನ್ ನೀಡುವ ಸಂದರ್ಭದಲ್ಲಿ ರೈತನ ಜಮೀನಿನಲ್ಲಿ ಟ್ರ್ಯಾಕ್ಟರ್ ಓಡಿಸಿ ಶೇಂಗಾ ಬೆಳೆ ಹಾಳು ಮಾಡಿರುವುದು ಕಂಡುಬಂದಿದೆ.ಇದರಿಂದ ಆಕ್ರೋಶಗೊಂಡ ರೈತ ಪರಿಹಾರ ನೀಡುವಂತೆ ಒತ್ತಾಯಿಸಿ ಈ ರೀತಿಯ ಆತ್ಮಹತ್ಯೆ ಯತ್ನದಂತೆ ಕಾಣುವ ಪ್ರತಿಭಟನೆಗೆ ಇಳಿದಿದ್ದಾನೆ.

ಇನ್ನೂ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ನಾಗರಾಜ ಗೊಂದಿ ಆರೋಗ್ಯದ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸುಮಾರು ೪೦೦ಮೀಟರ್ ಎತ್ತರದ ವಿದ್ಯುತ್ ಕಂಬದ ಮೇಲೆ ಕುಳಿತಿರುವುದು ಪರಿಸ್ಥಿತಿ ಮತ್ತಷ್ಟು ಗಂಭೀರತೆಗೆ ಸಾಕ್ಷಿಯಾಗಿದೆ.

ಘಟನೆಯ ನಂತರ ವಿಂಡ್ ಪವರ್ ಸಿಬ್ಬಂದಿ ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.ಇಷ್ಟಾದರೂ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ? ಎಂದು ಸುತ್ತಲಿನ ರೈತರು ಪ್ರಶ್ನಿಸಿದ್ದಾರೆ. ಈ ಘಟನೆ ಸಂಬಂಧ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಬೇಕು. ಅನ್ಯಾಯಕ್ಕೆ ಒಳಗಾದ ರೈತನಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.